Advertisement

ಮಲಪ್ರಭಾ ನದಿ ದಂಡೆಯಲ್ಲಿ ಮೊಸಳೆ ಪ್ರತ್ಯಕ್ಷ

03:40 PM Jan 08, 2021 | Team Udayavani |

ಹೊಳೆಆಲೂರ: ಸಮೀಪದ ಮೆಣಸಗಿ ಗ್ರಾಮದ ಮಲಪ್ರಭಾ ನದಿ ದಂಡೆಯಲ್ಲಿ ಗುರುವಾರ ಸಾಯಂಕಾಲ ಬೃಹತ್‌ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

Advertisement

ಮೊಸಳೆ ಕಾಣಿಸಿಕೊಂಡಿರುವ ಮೆಣಸಗಿ ಗ್ರಾಮದ ಮಲಪ್ರಭಾ ನದಿಯ ಎರಡೂ ದಂಡೆಯಲ್ಲಿ ನೂರಾರು ರೈತರ ಪಂಪ್‌ಸೆಟ್‌ಗಳಿದ್ದು, ನಿತ್ಯ ಕೃಷಿ ಕಾರ್ಯಗಳಿಗಾಗಿ ಹಾಗೂ ಹೂಲಗಳಿಗೆ ನೀರು ಹಾಯಿಸಲು ನದಿ ದಡಕ್ಕೆ ತೆರಳುವುದು ಸಹಜ. ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಮೊಸಳೆಯಿಂದ ರೈತರು ಆತಂಕಗೊಂಡಿದ್ದಾರೆ. ಮೊಸಳೆ ಕಾಣಿಸಿಕೊಂಡ ತಕ್ಷಣ ಎಲ್ಲ ರೈತರು ಭಯಗೊಂಡು ತಮ್ಮ ಪಂಪ್‌ಸೆಟ್‌ ಬಂದ ಮಾಡಿಕೊಂಡು ಮನೆಯತ್ತ ತೆರಳಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ
ಹೊಳೆಆಲೂರಿನ ಮಲಪ್ರಭಾ ನದಿಯಲ್ಲಿ ಅಂದಾಜು 45 ವರ್ಷದ 7 ಅಡಿ ಉದ್ದದ ಬೃಹತ್‌ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆಯವರು ಹಾಗೂ ಸ್ಥಳೀಯ ಪೊಲೀಸರು ಸತತ ಮೂರು ದಿನಗಳ ಶೋಧ ಕಾರ್ಯ ನಡೆಸಿದರೂ ಅದು ಪತ್ತೆಯಾಗಿರಲಿಲ್ಲ. ಆದರೆ, ನಾಲ್ಕನೇ ದಿನ ಶವವಾಗಿ ಪತ್ತೆಯಾಗಿತ್ತು.

ಇದನ್ನೂ ಓದಿ:“ಸ್ವಾಭಿಮಾನಿ ರೈತ”: ರೈತರಿಗೆ ಗುರುತಿನ‌ ಚೀಟಿ ನೀಡಲು ಮುಂದಾದ ಸರ್ಕಾರ

ಮಲಪ್ರಭಾ ನದಿಯಲ್ಲಿ ನೀರು ಸಹ ಅಷ್ಟೊಂದು ಆಳವಾಗಿಲ್ಲ. ಬಹುಶಃ ನೆರೆ ಹಾವಳಿ ಸಂದರ್ಭದಲ್ಲಿ ನವಿಲು ತೀರ್ಥ ಆಣೆಕಟ್ಟೆಯಿಂದ ಇವು ಬಂದಿರಬಹುದು ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಕೇವಲ ಎರಡು ತಿಂಗಳಲ್ಲಿ ಮತ್ತೆ ಮೊಸಳೆ ಕಾಣಿಸಿಕೊಂಡಿರುವುದು ಮೆಣಸಗಿ ಗ್ರಾಮ ಸೇರಿದಂತೆ ಶಿರೋಳ, ಹೊಳೆಮಣ್ಣೂರ, ಕಿತ್ತಲಿ ಸುತ್ತಲಿನ ಗ್ರಾಮಗಳ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

ಮೊಸಳೆ ಕಾಣಿಸಿಕೊಂಡ ವಿಷಯವನ್ನು ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದ್ದು, ಗದಗದಿಂದ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಲಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next