ರಾಯಚೂರು: ಭತ್ತದ ಗದ್ದೆಗೆ ನುಗ್ಗಿದ ಮೊಸಳೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಯಾಪಲದಿನ್ನಿ ಗ್ರಾಮ ಸಮೀಪ ಶನಿವಾರ ನಡೆದಿದೆ.
ಕೃಷ್ಣ ನದಿಪಾತ್ರದಲ್ಲಿರುವ ಈ ಗ್ರಾಮದ ಸಮೀಪದ ಜಂಗ್ಲಪ್ಪ ಎನ್ನುವ ರೈತನ ಭತ್ತದ ಜಮೀನಿಗೆ ಮೊಸಳೆ ನುಗ್ಗಿದೆ. ಈ ಬಗ್ಗೆ ಗ್ರಾಮದ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟಿನ ಕಾರ್ಯದರ್ಶಿ ನರಸಿಂಹಲು, ವಲಯದ ಅರಣ್ಯ ಅಧಿಕಾರಿ ರಾಜೇಶ್ ನಾಯಕ್ ರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳಿದ ವೀರ ಯೋಧರಿಗೆ ಉಜಿರೆಯಲ್ಲಿ ಭವ್ಯ ಸ್ವಾಗತ
ಅರಣ್ಯ ರಕ್ಷಕ ಯಲ್ಲಪ್ಪ ಮರ್ಚೆಡ್ ಸ್ಥಳಕ್ಕೆ ಭೇಟಿ ನೀಡಿ ಡಿ.ರಾಂಪುರ ಗ್ರಾಮದ ಮೀನುಗಾರರ ನೆರವಿನೊಂದಿಗೆ ಬಲೆ ಹಾಕಿ ಮೊಸಳೆ ಹಿಡಿದಿದ್ದಾರೆ. ಅಂದಾಜು 3 – 4 ವರ್ಷದ ಮೊಸಳೆಯಾಗಿದ್ದು, ಸುಮಾರು 1.5 ಮೀಟರ್ ನಷ್ಟು ಉದ್ದವಿದೆ. ಆಗಾಗ ಗ್ರಾಮದ ಹಳ್ಳದಲ್ಲಿ, ರೈತರ ಜಮೀನುಗಳಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟು ಮಾಡುತ್ತಿತ್ತು. ಬಳಿಕ ಮೊಸಳೆಯನ್ನು ಜನ ಸಂಚಾರವಿಲ್ಲದ ಕೃಷ್ಣಾನದಿಯ ಜುರಾಲಾ ಡ್ಯಾಮ್ ನ ಹಿನ್ನೀರಿನಲ್ಲಿ ಬಿಡಲಾಯಿತು.
ಮೊಸಳೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಬ್ದುಲ್ ಭಾಷಾ, ಯಾಪಲದಿನ್ನಿ ಠಾಣೆಯ ನಾಗರಾಜ್, ಮೀನುಗಾರ ಭಗವಂತ, ಗ್ರಾಮದ ಅಂಬರೀಶ ಜಂಗಲಪ್ಪ ರವಿಕುಮಾರ್ ಮೌಲಪ್ಪ ಇತರರು ಭಾಗವಹಿಸಿದರು.