Advertisement

ಕ್ರೊವೇಶಿಯ ತಂಡಕ್ಕೆ ಅಭೂತಪೂರ್ವ ಸ್ವಾಗತ

06:00 AM Jul 18, 2018 | Team Udayavani |

ಝಾಗ್ರೆಬ್‌: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟದ ಫೈನಲ್‌ನಲ್ಲಿ ಸೋತು ರನ್ನರ್‌ ಅಪ್‌ ಸ್ಥಾನದೊಂದಿಗೆ ತವರಿಗೆ ಬಂದಿಳಿದ ಕ್ರೊವೇಶಿಯ  ತಂಡದ ಆಟಗಾರರನ್ನು ಅಭೂತಪೂರ್ವ ರೀತಿಯಲ್ಲಿ ಸ್ವಾಗತಿಸಲಾಯಿತು. ರಾಜಧಾನಿ ಝಾಗ್ರೆಬ್‌ನಲ್ಲಿ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಸೇರಿದ್ದರಲ್ಲದೇ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ರಾಷ್ಟ್ರಧ್ವಜದ ಕೆಂಪು ಮತ್ತು ಬಿಳಿ ಚೌಕಾಕಾರದ ಬಣ್ಣದ ಬಟ್ಟೆ ಧರಿಸಿದ ಅಭಿಮಾನಿಗಳು ಧ್ವಜವನ್ನು ಬೀಸುತ್ತ ನಗರದ ಪ್ರಮುಖ ರಸ್ತೆಗಳಲ್ಲಿ ಸೇರಿ ತೆರೆದ ಬಸ್‌ನಲ್ಲಿ ಆಗಮಿಸಿದ ಕ್ರೊವೇಶಿಯದ ಆಟಗಾರರನ್ನು ಸ್ವಾಗತಿಸಿದರು. 

Advertisement

ಚೊಚ್ಚಲ ಬಾರಿ ವಿಶ್ವಕಪ್‌ನ ಫೈನಲಿಗೇರಿದ ಕ್ರೊವೇಶಿಯದ ಈ ಸಾಧನೆಯನ್ನು ದೇಶವಿಡೀ ಆಚರಿಸಲಾಗುತ್ತಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿ ಇಂತಹ ಬೃಹತ್‌ ಸಂಭ್ರಮಾಚರಣೆ ನಡೆದಿದೆ ಎಂದು ವೀಕ್ಷಕರು ಬಣ್ಣಿಸಿದ್ದಾರೆ. 

ಸಂಭ್ರಮದಲ್ಲಿ ಮುಳುಗಿದ ಅಭಿಮಾನಿಗಳು ಹಾಡುತ್ತ, ಕುಣಿಯುತ್ತ ನಗರದಲ್ಲಿ ಸಂಚರಿಸಿದರು. ತೆರೆದ ಬಸ್‌ನಲ್ಲಿ ಆಗಮಿಸಿದ ಕ್ರೊವೇಶಿಯ ಆಟಗಾರರು ಅಲ್ಲಲ್ಲಿ ಅಭಿಮಾನಿಗಳ ಆಟೋಗ್ರಾಫ್ಗೆ ಸಹಿ ಹಾಕಿದರು. ಇದರಿಂದ ಆಗಾಗ್ಗೆ ಟ್ರಾಫಿಕ್‌ ಜಾಮ್‌ ಆಗುತ್ತಿತ್ತು. ಎರಡೂವರೆ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ತಂಡವನ್ನು ಅಭಿನಂದಿಸಲು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಥ್ಯಾಂಕ್ಯೂ ಕ್ರೊವೇಶಿಯ
ಥ್ಯಾಂಕ್ಯೂ ಕ್ರೊವೇಶಿಯ, ಥ್ಯಾಂಕ್ಯೂ ಝಾಗ್ರೆಬ್‌ ಎಂದು ನಾಯಕ ಲುಕ ಮೊಡ್ರಿಕ್‌ ಸಂಭ್ರಮದಿಂದ ಹೇಳಿದರು. ಅವರು ಕೂಟದ ಶ್ರೇಷ್ಠ ಆಟಗಾರನಿಗೆ ನೀಡಲಾಗುವ ಗೋಲ್ಡನ್‌ ಬಾಲ್‌ ಪ್ರಶಸ್ತಿಗೆ ಪಾತ್ರರಾಗಿದ್ದರು. ನಮ್ಮ ಸಂಭ್ರಮ, ಆನಂದವನ್ನು ಬಣ್ಣಿಸಲು ಶಬ್ದಗಳು ಬರುತ್ತಿಲ್ಲ ಎಂದು ಮಿಡ್‌ಫಿಲ್ಡರ್‌ ಇವಾನ್‌ ರೆಕಿಟಿಕ್‌ ತಿಳಿಸಿದರು.

ಝಾಗ್ರೆಬ್‌ ನಗರವಲ್ಲದೇ ದೇಶದ ಇತರ ಭಾಗಗಳಿಂದಲೂ ಸಾವಿರಾರು ಅಭಿಮಾನಿಗಳು ಆಟಗಾರರನ್ನು ನೋಡಲು ಆಗಮಿಸಿದ್ದರು. ಅಪಾರ ಜನಸ್ತೋಮದಿಂದಾಗಿ ಉಸಿರಾಟದ ಸಮಸ್ಯೆಯಿಂದ ಹಲವು ಮಂದಿ ಕುಸಿದು ಬಿದ್ದರು. ಅವರಿಗೆ ತುರ್ತು ವೈದ್ಯಕೀಯ ಸೇವೆ ನೀಡಲಾಯಿತು. 
ವಿಮಾನನಿಲ್ದಾಣದಿಂದ ತೆರೆದ ಬಸ್‌ನಲ್ಲಿ ಆಗಮಿಸಿದ ಆಟಗಾರರು ಸಾಗಿದ ರಸ್ತೆಯ ಎರಡೂ ಕಡೆ ಅಭಿಮಾನಿಗಳು ತುಂಬಿದ್ದರು ಮತ್ತು ಕಿರುಚುತ್ತಿದ್ದರು. ಫಿಯರಿ ಹಾರ್ಟ್‌, ದ ಪ್ರೈಡ್‌ ಆಫ್ ಕ್ರೊವೇಶಿಯ ಎಂಬ ಬರಹದ ದೊಡ್ಡ ಕಟೌಟ್‌ ಒಂದನ್ನು ಹಾಕಲಾಗಿತ್ತು. ತವರಿನಲ್ಲಿ ಕ್ರೊವೇಶಿಯ ತಂಡವನ್ನು ಫಿಯರಿ ಎಂದು ಕರೆಯಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next