Advertisement

ಫಿಫಾ ವಿಶ್ವಕಪ್‌: ಕೆನಡಾವನ್ನು ಹೊರದಬ್ಬಿದ ಕ್ರೊವೇಶಿಯಾ

05:32 PM Nov 28, 2022 | Team Udayavani |

ದೋಹಾ: ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ಕೆನಡಾ ಆಟ ಮುಗಿದಿದೆ. “ಖಲೀಫಾ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ರವಿವಾರ ರಾತ್ರಿ ನಡೆದ “ಎಫ್’ ವಿಭಾಗದ ಪಂದ್ಯದಲ್ಲಿ ಅದು ಕ್ರೊವೇಶಿಯಾ ಕೈಯಲ್ಲಿ 1-4 ಗೋಲುಗಳ ಹೊಡೆತ ಅನುಭವಿಸಿ ಕೂಟದಿಂದ ನಿರ್ಗಮಿಸಿತು. ಈ ಗೆಲುವಿನೊಂದಿಗೆ ಕಳೆದ ಸಲದ ರನ್ನರ್ ಅಪ್‌ ಕ್ರೊವೇಶಿಯಾ ಅಗ್ರಸ್ಥಾನಕ್ಕೆ ನೆಗೆಯಿತು.

Advertisement

2ನೇ ನಿಮಿಷದಲ್ಲೇ ಡೇವಿಸ್‌ ಗೋಲೊಂದನ್ನು ಸಿಡಿಸಿ ಕೆನಡಾಕ್ಕೆ ಮುನ್ನಡೆಯನ್ನೇನೋ ತಂದಿತ್ತರು. ಆದರೆ ಇಲ್ಲಿಂದ ಮುಂದೆ ಕ್ರೊವೇಶಿಯಾ ತನ್ನ ಆಕ್ರಮಣವನ್ನು ತೀವ್ರಗೊಳಿಸುತ್ತ ಹೋಯಿತು. ವಿರಾಮದ ಅವಧಿಯೊಳಗೆ 2 ಗೋಲು ಬಾರಿಸಿ ಮೇಲುಗೈ ಸಾಧಿಸಿತು.

ಆ್ಯಂಡ್ರೇಜ್‌ ಕ್ರಾಮರಿಕ್‌ ಅವಳಿ ಗೋಲು ಬಾರಿಸಿ ಮಿಂಚಿದರು (36ನೇ ಮತ್ತು 70ನೇ ನಿಮಿಷ). ಮಾರ್ಕೊ ಲಿವಾಜ (44ನೇ ನಿಮಿಷ) ಮತ್ತು ಲಾವ್ರೊ ಮೇಜರ್‌ (90+ 4ನೇ ನಿಮಿಷ) ಉಳಿದೆರಡು ಗೋಲು ಹೊಡೆದರು. ಕೆನಡಾ ತನ್ನ ಮೊದಲ ಪಂದ್ಯದಲ್ಲಿ ಬೆಲ್ಜಿಯಂಗೆ ಶರಣಾಗಿತ್ತು.

ಕ್ರೊವೇಶಿಯಾ-ಮೊರೊಕ್ಕೊ ನಡುವಿನ ಮೊದಲ ಪಂದ್ಯ ಡ್ರಾಗೊಂಡಿತ್ತು. ಸದ್ಯ ಈ ಎರಡೂ ತಂಡಗಳು 4 ಅಂಕ ಹೊಂದಿವೆ. ಹೆಚ್ಚು ಗೋಲು ಹೊಡೆದ ಲೆಕ್ಕಾಚಾರದಲ್ಲಿ ಕ್ರೊವೇಶಿಯಾ ಮುಂದಿದೆ. ಅದು ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬೆಲ್ಜಿಯಂ ಸವಾಲನ್ನು ಎದುರಿಸಲಿದೆ. ನಾಕೌಟ್‌ ಪ್ರವೇಶಿಸಬೇಕಾದರೆ ಬೆಲ್ಜಿಯಂಗೆ ಗೆಲುವು ಅನಿವಾರ್ಯವಾಗಿದೆ.

ಫ‌ಲಿತಾಂಶ
ಕ್ರೊವೇಶಿಯಾ: 04
ಕೆನಡಾ: 01

Advertisement
Advertisement

Udayavani is now on Telegram. Click here to join our channel and stay updated with the latest news.

Next