ಮೈಸೂರು: ಲಸಿಕೆ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದವರ ಬಾಯಿ ಮುಚ್ಚಿಸುವ ಕೆಲಸವನ್ನು ಈಗ ಮಾಡ ಲಾಗಿದೆ ಎಂದು ಕ್ರೀಡಾ ಸಚಿವ ಸಿ. ನಾರಾಯಣಗೌಡ ಹೇಳಿದರು.
ನಗರದ ನಜರ್‌ಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ನಡೆದ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಭಾರತದ ಇಡೀ ದೇಶದ ಜನರಿಗೆ ಲಸಿಕೆ ಪೂರೈಸುತ್ತದೆ ಎಂಬ ವಿಶ್ವಾಸ ಇರಲಿಲ್ಲ.
ಅನೇಕರು ಟೀಕಿಸುತ್ತಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೂರು ಕೋಟಿ ಲಸಿಕೆ ನೀಡಲಾಗಿದೆ. ಮೈಸೂರಿನಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ, ಕಾಪಾಡುವವರು ಯಾರೂ ಇಲ್ಲ ಎಂಬ ಮಟ್ಟಿಗೆ ಬೊಬ್ಬೆ ಹಾಕಿದರು. ಆದರೆ, ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಮಾಡಿದಷ್ಟು ಸೇವೆಯನ್ನು ಬೇರೆ ಯಾವ ಪಕ್ಷವೂ ಮಾಡಿಲ್ಲ.
ಮನೆಯಲ್ಲಿ ಕುಳಿತು ಟೀಕಿಸುವವರು ಟೀಕಿಸುತ್ತಲೇ ಇದ್ದರು, ನಾವು ಸೇವೆ ಮತ್ತು ಸಂಘಟನೆಯನ್ನು ನಿರಂತರ ವಾಗಿ ಮಾಡುತ್ತಲೇ ಬಂದೆವು ಎಂದರು. ಮಾಜಿ ಸಿಎಂ ಯಡಿಯೂರಪ್ಪ ಅವರ ಸಹಕಾರದಿಂದ ಯಾರಿಗೂ ಚಿಂತೆ ಆಗದಂತೆ ನೋಡಿ ಕೊಳ್ಳಲಾಯಿತು. ಹಗಲು ಯಾವುದು, ರಾತ್ರಿ ಯಾವುದು ಎಂಬುದೇ ಗೊತ್ತಿರಲಿಲ್ಲ. ಯಡಿಯೂರಪ್ಪನವರು ಎಲ್ಲಾ ಶಾಸಕರು, ಸಚಿವರನ್ನು ಎಚ್ಚರಿಸುತ್ತಿದ್ದರು. ಅವರು ದಿನದ 17 ಗಂಟೆ ಕೆಲಸ ಮಾಡುತ್ತಿದ್ದರು.
ಮಂಡ್ಯದಲ್ಲೂ ಬಿಜೆಪಿ ಎಂಬುದನ್ನು ತಿಳಿಸಿಕೊಡಲಾಗಿದೆ. ಬಿಜೆಪಿಯಲ್ಲಿ ತರಬೇತಿ ಇದೆಯಲ್ಲ, ಅದು ಯಾವುದೇ ಪಕ್ಷದಲ್ಲಿಯೂ ಇಲ್ಲ. ನಾನು ಎರಡೂ ಪಕ್ಷದಲ್ಲೂ ಇದ್ದೆ. ಆದರೆ ಬಿಜೆಪಿಯಲ್ಲಿ ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಂಘಟಿಸಲಾಗುತ್ತಿದೆ. ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಕುಳಿತೇ ಇಲ್ಲ, ಕೆಲಸ ಮಾಡಿದ್ದೇವೆ. ಮನೆ ಮನೆಗೆ ಹೋಗಿ ಹುಡುಕಿ, ಹುಡುಕಿ ಲಸಿಕೆ ಹಾಕುವ ಕೆಲವನ್ನು ನಮ್ಮ ವೈದ್ಯರು, ದಾದಿಯರು ಮಾಡಿದ್ದಾರೆ. ಆ ಮೂಲಕ ಎಲ್ಲರ ಬಾಯಿ ಮುಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.