Advertisement

ಸ್ಪೀಕರ್‌ ಬಗ್ಗೆ ಸಿದ್ದು ಟೀಕೆ ಖಂಡನೀಯ: ರವಿಕುಮಾರ್‌

09:49 AM Oct 25, 2019 | Team Udayavani |

ಬೆಂಗಳೂರು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸುವ ಭರದಲ್ಲಿ ಉನ್ನತ ಸಾಂವಿಧಾನಿಕ ಹುದ್ದೆಯ ಪ್ರತಿಷ್ಠೆ ಮತ್ತು ಘನತೆಯನ್ನು ಗಾಳಿಗೆ ತೂರಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನಸಭಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದ್ದು, ಸ್ವತಃ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಕಾಂಗ್ರೆಸ್‌ ಕೂಡ ಬೆಂಬಲಿಸಿದೆ. ಇಡೀ ಸದನ ಸರ್ವಾನುಮತದಿಂದ ಆಯ್ಕೆ ಮಾಡಿದ ಸಭಾಧ್ಯಕ್ಷರ ಬಗ್ಗೆ “ಅವನ್ಯಾವನೋ ಪುಣ್ಯಾತ್ಮನನ್ನು ಸ್ಪೀಕರ್‌ ಮಾಡಿ ಬಿಟ್ಟಿದ್ದಾರೆ’ ಎಂಬುದಾಗಿ ಸಿದ್ದರಾಮಯ್ಯ ಅವರು ಏಕವಚನದಲ್ಲಿ ವಾಗ್ಧಾಳಿ ಮಾಡಿರುವ ನಡವಳಿಕೆ ಶಾಸನಸಭೆಗೆ ತೋರಿದ ಅಗೌರವ. ಮಾತ್ರವಲ್ಲದೇ ಸಮಸ್ತ ಜನಪ್ರತಿನಿಧಿಗಳಿಗೆ ಮಾಡಿದ ಅವಮಾನವೂ ಹೌದು. ಸಿದ್ದರಾಮಯ್ಯ ಅವರಂಥ ನಾಯಕರಿಗೆ ಇಂಥ ಅಹಂಕಾರದ ನಡವಳಿಕೆ ಶೋಭೆ ತರುವುದಿಲ್ಲ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಗೆ ಆರನೇ ಬಾರಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಅವರು ಹೊಸಬ, ಏನೂ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಸ್ವತಃ ತವರು ಕ್ಷೇತ್ರದಲ್ಲಿ ಗೆಲ್ಲಲಾಗದೇ ಮತದಾರರಿಂದ ತಿರಸ್ಕೃತಗೊಂಡ ಸಿದ್ದರಾಮಯ್ಯನವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ವಿಧಾನಸಭೆಯಲ್ಲಿ ಸ್ಪೀಕರ್‌ ಹುದ್ದೆಯನ್ನು ಸೃಷ್ಟಿಸಿರುವುದೇ ಸದನದ ಸದಸ್ಯರನ್ನು ನಿಯಂತ್ರಿಸುವ ಕಾರ್ಯ ನಿಭಾಯಹಿಸುವುದಕ್ಕೆ ಹೊರತು ಸಿದ್ದರಾಮಯ್ಯ ಅವರು ಬಯಸಿದಂತೆ ಎಷ್ಟು ಹೊತ್ತಾದರೂ ಮಾತನಾಡಲು ಅವಕಾಶ ನೀಡುವುದಕ್ಕಲ್ಲ ಎಂದು ಕಿಡಿ ಕಾರಿದ್ದಾರೆ.

ಸದನದಲ್ಲಿ ಸದಸ್ಯರಿಗೆ ಮಾತನಾಡಲು ಕಾಲಮಿತಿ ನಿಗದಿಪಡಿಸುವುದು ಸ್ಪೀಕರ್‌ ಪರಮಾಧಿಕಾರ. ತನಗೆ ಹೆಚ್ಚು ಅವಧಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂಬ ಸಿಟ್ಟಿಗೆ ಸ್ಪೀಕರ್‌ ವಿರುದ್ಧ ವಾಗ್ಧಾಳಿ ನಡೆಸುವುದು ಯಾರಿಗೂ ಶೋಭೆ ತರುವುದಿಲ್ಲ. ಸದನದ ಹೊರಗೆ ಮಾತನಾಡಿ ಸದನಕ್ಕಿರುವ ಘನತೆ- ಗೌರವವನ್ನು ಗಾಳಿಗೆ ತೂರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿಗಳೇ, ಸದನಕ್ಕೆ ಅಗೌರವ ತೋರುವಂತೆ ಮಾತನಾಡುವ ಪರಂಪರೆಯನ್ನು ಮುಂದುವರಿಸಬಾರದು ಎಂದು ಬಿಜೆಪಿ ಆಗ್ರಹಿಸುತ್ತದೆ. ಸದನದ ವಿಷಯದಲ್ಲೂ ರಾಜಕೀಯವಾಗಿ ಟೀಕೆ ಮುಂದುವರಿಸಿದರೆ ಎಲ್ಲೆಡೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next