ಮ್ಯಾಂಚೆಸ್ಟರ್: ವಿಶ್ವಶ್ರೇಷ್ಠ ಫುಟ್ಬಾಲಿಗ, ಪೋರ್ಚುಗಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್‌ನ ಫಾರ್ವರ್ಡ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವೃತ್ತಿಪರ ಫುಟ್‌ಬಾಲ್ ನಲ್ಲಿ ಅತ್ಯಧಿಕ ಗೋಲು ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಟೋಟನ್‌ಹ್ಯಾಮ್ ಹಾಟ್‌ಸ್ಪರ್ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸುವ ಮೂಲಕ ಅವರು ನೂತನ ಎತ್ತರ ತಲುಪಿದರು.
ಈ ಸಾಧನೆಯೊಂದಿಗೆ ರೊನಾಲ್ಡೊ ಬಾರಿಸಿದ ಗೋಲುಗಳ ಸಂಖ್ಯೆ 807ಕ್ಕೆ ಏರಿತು. ವಿಶ್ವ ಫುಟ್‌ಬಾಲ್‌ನಲ್ಲಿ ಅತೀ ಹೆಚ್ಚು ಗೋಲು ಹೊಡೆದ ಅಧಿಕೃತ ದಾಖಲೆಯೇನೂ ಫಿಫಾ ಬಳಿ ಇಲ್ಲ. ಆದರೆ 1931-55ರ ಅವಧಿಯಲ್ಲಿ ಆಡಿದ ಆಸ್ಟ್ರಿಯಾದ ಜೋಸೆಫ್ ಬಿಕಾನ್ 805 ಗೋಲು ಹೊಡೆದದ್ದೇ ದಾಖಲೆ ಎಂಬ ಮಾಹಿತಿ ನೀಡಿದೆ. ಆದರೆ “ದ ಜೆಕ್ ಎಫ್ಎ’ ಒದಗಿಸಿರುವ ಅಂಕಿಅಂಶದಂತೆ ಜೋಸೆಫ್ ಬಿಕಾನ್ ಅವರ ಗೋಲುಗಳ ಸಂಖ್ಯೆ 821.
ಇದು ರೊನಾಲ್ಡೊ ಸಾಧಿಸಿದ 59ನೇ ಹ್ಯಾಟ್ರಿಕ್. ಸ್ಪೋರ್ಟಿಂಗ್, ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ಅವರ ಗೋಲುಗಳು ದಾಖಲಾಗಿವೆ.
ಬ್ರಝಿಲ್‌ನ ಪೀಲೆ, ರೊಮಾರಿಯೊ ತಮ್ಮ ಫುಟ್‌ಬಾಲ್ ಬಾಳ್ವೆಯಲ್ಲಿ ಸಾವಿರಕ್ಕೂ ಹೆಚ್ಚು ಗೋಲು ಬಾರಿಸಿದ್ದಾರೆ. ಆದರೆ ಇವುಗಳಲ್ಲಿ ಅಮೆಚೂರ್, ಅನಧಿಕೃತ ಹಾಗೂ ಸೌಹಾರ್ದ ಪಂದ್ಯಗಳಲ್ಲಿ ಹೊಡೆದ ಗೋಲುಗಳೂ ಸೇರಿವೆ.