Advertisement

ಶ್ರೀಲಂಕಾದಂತೆಯೇ ದಿವಾಳಿಯಾಗುವಂಚಿಗೆ ಪಾಕ್‌

08:26 PM Jan 31, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನಕ್ಕೀಗ ಶ್ರೀಲಂಕಾ ಮಾದರಿಯಲ್ಲೇ ಆರ್ಥಿಕವಾಗಿ ದಿವಾಳಿಯಾಗುವ ಭೀತಿ ಶುರುವಾಗಿದೆ. ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ಅಧಿಕಾರಿಗಳು ಸದ್ಯ ಪಾಕ್‌ಗೆ ತೆರಳಿ, ಪರಿಸ್ಥಿತಿಯ ಅವಲೋಕನ ಶುರು ಮಾಡಿದ್ದಾರೆ. ಇದರ ಬೆನ್ನಲ್ಲೇ ಪಾಕ್‌ ಅರ್ಥಶಾಸ್ತ್ರಜ್ಞರಿಂದ, ಜನನಾಯಕರಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂಬ ಮಾಹಿತಿ ಹೊರಬಿದ್ದಿದೆ.

Advertisement

ಪಾಕಿಸ್ತಾನದ ರೂಪಾಯಿ ಮೌಲ್ಯ ತೀರಾ ಕುಸಿದಿದೆ, ಹಣದುಬ್ಬರ ವಿಪರೀತ ಹೆಚ್ಚಾಗಿದೆ. ಇಂಧನ ಪೂರೈಕೆ ಕಡಿಮೆಯಾಗಿದೆ. ಮಾತ್ರವಲ್ಲ ಡಾಲರ್‌ ಎದುರು ಅದರ ರೂಪಾಯಿ ಪೂರ್ಣವಾಗಿ ನೆಲಕಚ್ಚಿದೆ. ಪರಿಸ್ಥಿತಿ ಹೀಗಿದ್ದರೂ ಆ ದೇಶಕ್ಕೆ ಇತರೆ ದೇಶಗಳು ಷರತ್ತುರಹಿತವಾಗಿ ನೆರವು ನೀಡಲು ಮುಂದೆ ಬರುತ್ತಿಲ್ಲ. ಜೊತೆಗೆ ಐಎಂಎಫ್ ಕೂಡ ನೆರವು ಬೇಕಾದರೆ ತೆರಿಗೆಗಳನ್ನು ಏರಿಸಬೇಕು, ಸಬ್ಸಿಡಿ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಹೇಳಿದೆ. ಅದಕ್ಕೆ ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್ ಚುನಾವಣಾ ಹಿನ್ನೆಲೆಯಲ್ಲಿ ಒಪ್ಪಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಈ ಷರತ್ತುಗಳಿಗೆ ತಲೆಬಾಗುವ ಸ್ಥಿತಿ ಎದುರಾಗಿದೆ.

ನಾವು ಪೂರ್ತಿ ರಸ್ತೆಯಂಚಿಗೆ ಬಂದಿದ್ದೇವೆ. ಇನ್ನು ದಾರಿಯೇ ಇಲ್ಲ. ಒಂದು ವೇಳೆ ಸರ್ಕಾರ ಐಎಂಎಫ್ ಷರತ್ತುಗಳನ್ನು ಪಾಲಿಸದಿದ್ದರೆ ಪಾಕ್‌ ದಿವಾಳಿಯಾಗುತ್ತದೆ, ಶ್ರೀಲಂಕಾ ಮಾದರಿಯನ್ನೇ ಎದುರಿಸಬೇಕಾಗುತ್ತದೆ ಎಂದು ವಿಶ್ವ ಬ್ಯಾಂಕ್‌ ಮಾಜಿ ಅರ್ಥಶಾಸ್ತ್ರಜ್ಞ ಅಬಿದ್‌ ಹಸನ್‌ ಹೇಳಿದ್ದಾರೆ.

ಬಾಂಗ್ಲಾಕ್ಕೆ ನೆರವು, ಶ್ರೀಲಂಕಾ, ಪಾಕ್‌ಗೆ ಇನ್ನೂ ಇಲ್ಲ;
ಇನ್ನೊಂದು ಕಡೆ ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಬಾಂಗ್ಲಾಕ್ಕೆ ಐಎಂಎಫ್ ಹಲವು ಷರತ್ತುಗಳೊಡನೆ 4.7 ಬಿಲಿಯನ್‌ ಡಾಲರ್‌ ಸಾಲ ನೀಡಲು ಒಪ್ಪಿದೆ. ವಿಚಿತ್ರವೆಂದರೆ ಬಹಳ ಮುಂಚೆಯೇ ಅರ್ಜಿ ಹಾಕಿ ಕಾದು ಕುಳಿತಿರುವ ಶ್ರೀಲಂಕಾ, ಪಾಕ್‌ಗಳಿಗೆ ಇನ್ನೂ ಸಾಲ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next