Advertisement
1985ರಲ್ಲಿ ಗ್ರಾಮದ ಹೂಗಾರ ಕುಟುಂಬದವರಿಗೆ ಸೇರಿದ್ದು ಎನ್ನಲಾದ ರಿ.ಸ.ನಂ 33/1/2 ಸೇರಿ ಒಟ್ಟು 35 ಗುಂಟೆ ಜಾಗೆಯಲ್ಲಿ ಮಂಡಳ ಪಂಚಾಯಿತಿ ನಿವೇಶನ ಗುರುತಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಿಕೊಟ್ಟಿತ್ತು. 41 ಕುಟುಂಬಗಳಿಗೆ ತಹಸೀಲ್ದಾರ್‌ರಿಂದ ಹಕ್ಕು ಪತ್ರವನ್ನೂ ನೀಡಲಾಗಿತ್ತು. ಆ ಸಂದರ್ಭದಲ್ಲಿ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಮನೆಗಳನ್ನೂ ನಿರ್ಮಿಸಿಕೊಡಲಾಗಿತ್ತು. ಕಾಲ ಕ್ರಮೇಣ ಇಲ್ಲಿನ ನಿವಾಸಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಗ್ರಾಪಂನವರು ಇದೂವರೆಗೂ ಭೂಮಾಲಿಕರಿಂದ ಸ್ವಾಧೀನಪಡಿಸಿಕೊಂಡ ನಿವೇಶನ ಕಾಗದ ಪತ್ರಗಳನ್ನು ತಿದ್ದುಪಡಿ ಮಾಡಿಕೊಳ್ಳದ್ದರಿಂದ ಈಗ ಬಿಕ್ಕಟ್ಟು ಎದುರಾಗಿದೆ. ಈಗ ಈ ಜಾಗೆಯ ಮೂಲ ಭೂ ಮಾಲೀಕರು ತಗಾದೆ ತೆಗೆಯುತ್ತಿರುವುದರಿಂದ ಇಲ್ಲಿನ ನಿವಾಸಿಗರು ತಮ್ಮ ಹಳೆಯದಾದ, ಬೀಳುವ ಸ್ಥಿತಿಯಲ್ಲಿರುವ ಮನೆಗಳನ್ನು ಮರು ನಿರ್ಮಿಸಿಕೊಳ್ಳಲು ಮುಂದಾದರೆ ಭೂಮಾಲಿಕರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ.
Related Articles
Advertisement
ಈ ಕುರಿತು ಇಲ್ಲಿನ ನಿವಾಸಿಗಳಾದ ಗೌರಮ್ಮ ಮಠಪತಿ, ಕಮಲವ್ವ ಹತ್ತಿಕಾಳ, ಪಾರವ್ವ ನಿಂಗನಗೌಡ್ರ, ಲಕ್ಷ್ಮವ್ವ ಪಾಟೀಲ, ದುರುಗಮ್ಮ ಭಜಂತ್ರಿ, ಲಕ್ಷ್ಮವ್ವ ಕೊಲ್ಲಾರಿ, ಈರವ್ವ ಮ್ಯಾಗೇರಿ, ದುರಗವ್ವ ಮಲ್ಲೆಮ್ಮನವರ, ನಿಂಗವ್ವ ಪಿಡ್ಡನಗೌಡ್ರ, ಲಕ್ಷ್ಮವ್ವ ನಿಂಗನಗೌಡ್ರ, ಶಂಕ್ರಪ್ಪ ಮಲ್ಲಮ್ಮನವರ, ಫಕ್ಕೀರಪ್ಪ ಕೊಲ್ಲಾರಿ, ಪುಂಡಲೀಕ ಮಾಂಡ್ರೆ, ಈರಣ್ಣ ಹತ್ತಿಕಾಳ ಮತ್ತಿತರರು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಂಬಂಧಪಟ್ಟವರು ಮೂಲ ಭೂ ಮಾಲಿಕರಿಂದ ನಮ್ಮನ್ನು ಮುಕ್ತಗೊಳಿಸಿ ಶಾಶ್ವತ ಭದ್ರತೆ ಕಲ್ಪಿಸಿಕೊಟ್ಟು ಗೋಳು ತಪ್ಪಿಸಬೇಕೆಂದು ಅವಲೊತ್ತುಕೊಂಡಿದ್ದಾರೆ.
ಯಳವತ್ತಿ ಗ್ರಾಮದ ಹೊಸಕೆರೆ ಪ್ಲಾಟ್ ಮೂಲತಃ ಇದು ಚಾಕ್ರಿ( ಪೂಜಾರಿಕೆ) ಜಮೀನಾಗಿದೆ. ಅಖಂಡ ಧಾರವಾಡ ಜಿಲ್ಲೆ ಇದ್ದಾಗ ಅಂದಿನ ಜಿಲ್ಲಾಧಿಕಾರಿಗಳು ಈ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಸರ್ಕಾರಿ ಜಮೀನೆಂದು ನೋಟಿಪೈ ಮಾಡಿದ್ದಾರೆ. ಇದು ಯಾರಧ್ದೋ ಮಾಲಿಕತ್ವದ ಜಮೀನಲ್ಲ. ಆದರೆ ಮೂಲ ಪಹಣಿ ಪತ್ರಿಕೆಯಲ್ಲಿ ಮಾಲಿಕರ ಹೆಸರು ಮಾತ್ರ ಬದಲಾಗಿಲ್ಲ. ಈ ಹೆಸರು ಬದಲಾವಣೆಗಾಗಿ ಕಂದಾಯ ಇಲಾಖೆಗೆ ಸೂಕ್ತ ದಾಖಲೆಗಳೊಂದಿಗೆ ಬರೆಯಲಾಗಿದೆ. ಭೂಮಾಲಿಕರು ಅಲ್ಲಿನ ನಿವಾಸಿಗರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಆರ್.ವೈ. ಗುರಿಕಾರ.