Advertisement

Karkala ಇಕ್ಕಟ್ಟು ರಸ್ತೆಯಲ್ಲಿ ನಿಧಾನಗತಿ ಕಾಮಗಾರಿಯಿಂದ ಬಿಕ್ಕಟ್ಟು !

12:36 AM Sep 10, 2023 | Team Udayavani |

ಕಾರ್ಕಳ: ಮಾಳ ಘಾಟಿ ರಸ್ತೆಯಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಏಳೆಂಟು ತಿಂಗಳಿನಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ಮೊದಲೇ ಇಕ್ಕಟ್ಟಾಗಿರುವ ರಸ್ತೆಯಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಿದೆ.

Advertisement

ಕರಾವಳಿಯಿಂದ ಚಿಕ್ಕಮಗಳೂರು, ಕಳಸ, ಶೃಂಗೇರಿ ಮೊದಲಾದ ಭಾಗಗಳನ್ನು ತಲುಪುವ ಘಾಟಿ ರಸ್ತೆಯಲ್ಲಿ ಮಾಳದಿಂದ ಆರಂಭಗೊಂಡು ಎಸ್‌.ಕೆ. ಬಾರ್ಡರ್‌ ತನಕ ಹೆದ್ದಾರಿ ಬದಿಯಲ್ಲಿ ಕೇಬಲ್‌ ಅಳವಡಿಕೆ ಪ್ರಗತಿಯಲ್ಲಿದೆ. ಮೊದಲೇ ಅಗಲ ಕಿರಿದಾದ ತಿರುವು-ಮುರುವುಗಳ ಹೆದ್ದಾರಿ ಇದಾಗಿದ್ದು ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಹಾಗೂ ಅಪಘಾತಗಳಿಗೂ ಎಡೆಮಾಡಿ ಕೊಡುತ್ತಿದೆ.

ಕೇಬಲ್‌ ಅಳವಡಿಸಲೆಂದು ಹೆದ್ದಾರಿ ಬದಿ ಅಲ್ಲಲ್ಲಿ ಅಗೆದಿಟ್ಟಿರುವುದರಿಂದ ವಾಹನ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕಾಮಗಾರಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಹೊತ್ತಿರುವ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುವುದರಿಂದಲೂ ಸಂಚಾರಕ್ಕೆ ಅನನುಕೂಲವಾಗುತ್ತಿದೆ.

ಚಾಲನೆಗೆ ಹರಸಾಹಸ
ಘಟ್ಟ ಇಳಿದು ಬರುವ ವಾಹನಗಳು ವೇಗವಾಗಿ ಬರುತ್ತಿದ್ದು, ದೊಡ್ಡ ವಾಹನಗಳು ಎದುರಾದಾಗ ಬದಿಗೆ ಸರಿಯಲು ಸಾಧ್ಯವಾಗುತ್ತಿಲ್ಲ. ಮೊದಲೇ ಅಗಲ ಕಿರಿದಾದ ರಸ್ತೆ; ಅದರ‌ಲ್ಲಿ ಎರಡು ವಾಹನಗಳು ಸಾಗುವುದೇ ಕಷ್ಟಕರ ಎಂಬ ಸ್ಥಿತಿ ಇರುವಾಗ ರಸ್ತೆ ಬದಿ ಅಲ್ಲಲ್ಲಿ ಹೊಂಡಗಳನ್ನು ನಿರ್ಮಿಸಿರುವುದು ಅಪಾಯ ತಂದೊಡ್ಡುತ್ತಿದೆ.

ಹೆಚ್ಚು ಪ್ರವಾಸಿಗರ ವಾಹನ ಓಡಾಟ
ಹೊರ ಜಿಲ್ಲೆಗಳ ವಾಹನಗಳ ಚಾಲಕರಿಗೆ ರಸ್ತೆಯ ಪರಿಚಯವಿಲ್ಲದೆ ಇರುವುದು ಕೂಡ ಅಪಘಾತ ಹೆಚ್ಚಾಗಲು ಕಾರಣವಾಗುತ್ತಿದೆ. ಕಾಮಗಾರಿ ನಡೆಯುತ್ತಿರುವ ಬಗ್ಗೆ ಅರಿವಿಲ್ಲದೆ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ.

Advertisement

ವಾರಾಂತ್ಯದಲ್ಲಿ ಕಾರ್ಕಳ, ಮೂಡುಬಿದಿರೆ, ಮಂಗಳೂರು, ಉಡುಪಿ ಭಾಗಗಳಿಗೆ ಬರುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಬಳಿಕ ಮಲೆನಾಡು ಭಾಗದ ಶೃಂಗೇರಿ, ಹೊರನಾಡು, ಕಳಸ ಮೊದಲಾದೆಡೆಗೆ ತೆರಳಲು ಇದೇ ರಸ್ತೆಯನ್ನು ಬಳಸುತ್ತಾರೆ. ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ವಾಹನಗಳೇ ಹೆಚ್ಚಾಗಿ ಈ ರಸ್ತೆಯಲ್ಲಿ ಓಡಾಡುತ್ತವೆ. ಲಾರಿ, ಟಿಪ್ಪರ್‌ಗಳು ಭಾರದ ವಸ್ತುಗಳನ್ನು ತುಂಬಿಕೊಂಡು ಸಾಗುತ್ತವೆ. ಕೆಲವು ಕಡೆ ಎರಡು ವಾಹನಗಳು ಎದುರುಬದುರಾದಾಗ ಅನಿವಾರ್ಯವಾಗಿ ಒಂದು ವಾಹನ ಹಿಮ್ಮುಖವಾಗಿ ಚಲಿಸಿ ದಾರಿ ಬಿಟ್ಟುಕೊಡಬೇಕಾಗುತ್ತದೆ. ಓವರ್‌ ಟೇಕ್‌ ಮಾಡಲು ಹೋಗಿ ಕೇಬಲ್‌ ಗುಂಡಿಗೆ ಬಿದ್ದ ಹಲವು ಘಟನೆಗಳು ಇಲ್ಲಿ ಸಂಭವಿಸಿವೆ.

ಮಳೆಗಾಲದಲ್ಲಿ ಯಾಕೆ ಕಾಮಗಾರಿ?
ಘಾಟಿ ರಸ್ತೆಯಲ್ಲಿ ಕೇಬಲ್‌ ಅಳವಡಿಕೆ ಕಾಮಗಾರಿ ಆರಂಭಗೊಂಡು ಸುಮಾರು 8ರಿಂದ 9 ತಿಂಗಳುಗಳು ಕಳೆದಿವೆ. ಮಳೆಗಾಲ ಈ ಹೆದ್ದಾರಿಯಲ್ಲಿ ಬರೆಕುಸಿತ, ಮರ ರಸ್ತೆಗೆ ಬೀಳುವುದೆಲ್ಲ ನಡೆಯುತ್ತಿರುತ್ತದೆ. ಇದರ ನಡುವೆ ಮಳೆಗಾಲದ ಅವಧಿಯಲ್ಲೆ ಕೇಬಲ್‌ ಅಳವಡಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಅರಣ್ಯ ಇಲಾಖೆಯವರು ಗಮನಕ್ಕೆ ತಾರದೆ ಕೇಬಲ್‌ ಅಳವಡಿಕೆಗೆ ಅನುಮತಿ ನೀಡಿದ್ದ ಪರಿಣಾಮ ಸಮಸ್ಯೆ ಆಗಿದೆ. ಆದರೂ ನಾವು ಜಂಗಲ್‌ ಕಟ್ಟಿಂಗ್‌ ಎಲ್ಲ ಮಾಡಿಸಿದ್ದೇವೆ. ಅಪಾಯ ಇರುವಲ್ಲಿ ಬ್ಯಾರಿಕೇಡ್‌ ಇರಿಸಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ. ಆದರೆ ಇನ್ನೊಮ್ಮೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಸಂಚಾರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ.
– ಶಶಿಧರ್‌, ಸಹಾಯಕ ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ, ಶೃಂಗೇರಿ

ರಸ್ತೆಯೂ ಕಿರಿದು.ಇದರ ನಡುವೆ ಕೇಬಲ್‌ ಕಾಮಗಾರಿಯಿಂದಾಗಿ ವಾಹನ ಸಂಚಾರ ಸಾಧ್ಯವಾಗುವುದಿಲ್ಲ. ತುಸು ಎಚ್ಚರ ತಪ್ಪಿದರೂ ಅಪಘಾತ ನಿಶ್ಚಿತ. ಕೇಬಲ್‌ ಅಳವಡಿಕೆ ಕಾಮಗಾರಿಗೆ ಕನಿಷ್ಠ ಮಳೆಗಾಲ ಮುಗಿಯುವ ವರೆಗಾದರೂ ತಡೆ ನೀಡಬೇಕಿತ್ತು.
– ಪರಶುರಾಮ,
ಖಾಸಗಿ ವಾಹನ ಚಾಲಕ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next