ಧಾರವಾಡ: ಬಿಪಿಎಲ್ ಪಡಿತರವನ್ನು ಕೆಲವು ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅಂತವರ ಮೇಲೆ ಕ್ರಿಮಿನಲ್ ಮೊಕದ್ದಮೆ
ಹೂಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎಚ್ಚರಿಕೆ ನೀಡಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ಹಿಂದಿರುಗಿಸಲು ಸೆ. 30ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 859 ಪಡಿತರ ಚೀಟಿಗಳನ್ನು ಅವಧಿಯೊಳಗೆ ಹಾಗೂ ಗಡುವು ಮುಗಿದ ನಂತರ 305 ಪಡಿತರ ಚೀಟಿಗಳನ್ನು ಅನರ್ಹ ಕಾರ್ಡ್‌ದಾರರು ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.
ಅನರ್ಹರಿಗೆ ಜರಡಿ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ 4 ಚಕ್ರದ ಮತ್ತು ಅದಕ್ಕೂ ಮೇಲ್ಪಟ್ಟ ವಾಹನಗಳ ಮಾಲೀಕರ ವಿವರ ಪಡೆಯಲಾಗಿದೆ. ಹು-ಧಾ ಮಹಾನಗರ ಪಾಲಿಕೆ ಆಯುಕ್ತರಿಂದ ನಗರ, ಪಟ್ಟಣ ಪ್ರದೇಶಗಳಲ್ಲಿ 1000 ಚದರಡಿಗಿಂತ ದೊಡ್ಡದಾದ ಪಕ್ಕಾ ಮನೆ ಹೊಂದಿರುವ ಕುಟುಂಬಗಳ ಮಾಹಿತಿಯನ್ನೂ ಪಡೆಯಲಾಗಿದೆ. ಭೂ ಹಿಡುವಳಿಗೆ ಸಂಬಂಧಿಸಿದಂತೆ ಭೂಮಿ ಸಾಫ್ಟ್‌ವೇರ್ ದಿಂದ ಮಾಹಿತಿ ಪಡೆಯಲಾಗುತ್ತಿದೆ.
ಅದೇ ರೀತಿ ಸರ್ಕಾರಿ, ಅರೆ-ಸರ್ಕಾರಿ, ಖಾಸಗಿ ಸೇವೆ ಸಲ್ಲಿಸುತ್ತಿರುವವರು, ಆದಾಯ ತೆರಿಗೆ ಪಾವತಿಸುತ್ತಿರುವವರ ವಿವರ ಸಂಗ್ರಹಿಸಿ, ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಪತ್ತೆ ಹಚ್ಚಲು ಕ್ರಮ ವಹಿಸಲಾಗಿದೆ. ಅನರ್ಹರು ತಾವಾಗೇ ಪಡತರ ಚೀಟಿ ಸರಂಡರ್ ಮಾಡದಿದ್ದರೆ ಅಂತಹವರ ಮೇಲೆ ಕ್ರಿಮಿನಲ್
ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.