ನರಗುಂದ: ಕೋವಿಡ್ 19 ವಿರುದ್ಧ ಹೋರಾಡಲು ಸಾಮಾಜಿಕ ಅಂತರ ಪ್ರಮುಖವಾಗಿದೆ. ಯಾರಾದರೂ ಪದೇ ಪದೇ ಲಾಕ್ ಡೌನ್ ಮುರಿಯುವ ಪ್ರಯತ್ನ ಮುಂದುವರಿಸಿದರೆ ಅಂಥವರ ಮೇಲೆ ಮುಲಾಜಿಲ್ಲದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಚಿವ ಸಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ವೃದ್ಧೆ ಮೃತಪಟ್ಟ ರಂಗನವಾಡಿ ಪ್ರದೇಶದಲ್ಲಿ ಎರಡನೇ ಪ್ರಕರಣ ಮಹಿಳೆಯಿದ್ದು, ಮೂರನೇ ಪ್ರಕರಣದಲ್ಲಿ 46 ವರ್ಷ ಯುವಕನಿಗೆ ಪಾಸಿಟಿವ್ ಪತ್ತೆಯಾಗಿದೆ. ವಿಪರ್ಯಾಸವೆಂದರೆ ಈತನಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಈತನ ಪ್ರಥಮ ಸಂಪರ್ಕದಲ್ಲಿ 77 ಜನರನ್ನು ತಪಾಸಣೆ ಮಾಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹಕಾರದಿಂದ ಹೊಸದಾಗಿ 7, 8 ಜಿಲ್ಲೆಗಳಿಗೆ ಮಂಜೂರಾದ ಗಂಟಲು ದ್ರವ ಕೇಂದ್ರ ಸ್ಥಾಪನೆಯಲ್ಲಿ ಗದಗ ಜಿಲ್ಲೆಗೆ ಮೊದಲನೇಯದ್ದಾಗಿದೆ. ಡಿಸಿ, ಎಸ್‌ಪಿ, ಜಿಪಂ ಸಿಇಒ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಗಡಿಭಾಗ ತುರ್ತು ಸೇವೆ ವಾಹನ ಹೊರತುಪಡಿಸಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ ಎಂದರು.
ಎಚ್ಕೆ ಹೇಳಿಕೆಗೆ ಖಂಡನೆ: ಶಾಸಕ ಎಚ್. ಕೆ.ಪಾಟೀಲ ಅವರು ಜಿಲ್ಲೆಯಲ್ಲಿ ವ್ಯವಸ್ಥೆ ಸರಿಯಿಲ್ಲ. ಸರ್ಕಾರ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬ ಅರ್ಥದಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದು ದುರ್ದೈವ. ಉಸ್ತುವಾರಿ ಸಚಿವನಾಗಿ ಇದನ್ನು ನಾನು ಖಂಡಿಸುತ್ತೇನೆ. ಅವರನ್ನು ಕರೆದುಕೊಂಡೇ ನಾಲ್ಕು ಬಾರಿ ಸಭೆ ನಡೆಸಿದ್ದೇನೆ. ಅವರು ಕೊಟ್ಟ ಸಲಹೆಗಳನ್ನು ಚಾಚೂ ತಪ್ಪದೇ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೂ ಎಚ್. ಕೆ.ಪಾಟೀಲ ಅವರ ಅಪಸ್ವರದ ಹೇಳಿಕೆ ತೀವ್ರ ಖಂಡನೀಯ ಎಂದು ಸಚಿವ ಸಿ.ಸಿ.ಪಾಟೀಲ ಆರೋಪಿಸಿದರು.
ಕೋವಿಡ್ 19 ವಿರುದ್ಧ ಹೋರಾಟಕ್ಕೆ ನೆರವಾಗಿ ಎಪಿಎಂಸಿ ವತಿಯಿಂದ ಸಿಎಂ ಪರಿಹಾರ ನಿ ಧಿಗೆ ಈಗಾಗಲೇ 5 ಲಕ್ಷ ರೂ.ಚೆಕ್ ಕಳಿಸಿದೆ. ಇನ್ನೂ 5 ಲಕ್ಷ ರೂ.ನೀಡಲಾಗುತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಪಿಎಂಸಿ ಸದಸ್ಯ ಎನ್.ವಿ.ಮೇಟಿ, ಬಸು ಪಾಟೀಲ, ಜಯಪ್ರಕಾಶ ಕಂಠಿ, ಗುರಪ್ಪ ಆದೆಪ್ಪನವರ ಸುದ್ದಿಗೋಷ್ಠಿಯಲ್ಲಿದ್ದರು.