Advertisement

ಒತ್ತುವರಿ ತೆರವುಗೊಳಿಸದಿದ್ದರೆ ಕ್ರಿಮಿನಲ್‌ ಪ್ರಕರಣ

09:03 PM Feb 17, 2020 | Team Udayavani |

ಕುಣಿಗಲ್‌: ಸರ್ಕಾರಿ ರಸ್ತೆ ಹಾಗೂ ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗ ತೆರವುಗೊಳಿಸದ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಎಚ್ಚರಿಸಿದರು. ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ಪ.ಜಾತಿ, ಪ.ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

Advertisement

ಸಭೆ ಪ್ರಾರಂಭವಾಗುತ್ತಿದಂತೆ ವರದರಾಜು, ದಲಿತ್‌ ನಾರಾಯಣ್‌, ಎನ್‌.ನರಸಿಂಹಪ್ರಸಾದ್‌, ಎನ್‌. ರಾಜೇಶ್‌ ಮೊದಲಾದ ದಲಿತ ಮುಖಂಡರು ದಲಿತರ ಶವ ಸಂಸ್ಕಾರಕ್ಕೆ ಮೀಸಲಿಟ್ಟಿರುವ ಸರ್ಕಾರಿ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿದ್ದು, ಹಲವು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಇಂದರಿಂದ ಸಿಟ್ಟಾದ ತಹಶೀಲ್ದಾರ್‌, ತಾಲೂಕು ದಲಿತ ಹಿತ ರಕ್ಷಣ ಸಮಿತಿ ಅಧ್ಯಕ್ಷನಾಗಿದ್ದು, ನನ್ನ ಇಲಾಖೆಯಲ್ಲೇ ಕೆಲಸವಾಗುತ್ತಿಲ್ಲ ಎಂದರೆ ಜನರಿಗೆ ಏನೆಂದು ಉತ್ತರಿಸಲಿ ಎಂದು ಪ್ರಶ್ನಿಸಿದರು. ಜನರ ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಕೈಗೊಳ್ಳುವ ಯಾವುದೇ ತೀರ್ಮಾನ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌, ಜನರು ಅರ್ಜಿ ಕೊಟ್ಟ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆರ್‌ಐ, ವಿಎಗಳಿಗೆ ತಿಳಿಸಿದರು.

ತಾಲೂಕಿನಲ್ಲಿ 540 ಮುಜರಾಯಿ ದೇವಾಲಯಗಳಿದ್ದು, ಪ್ರತಿಯೊಬ್ಬರೂ ಮುಕ್ತವಾಗಿ ಹೋಗುವ ಅವಕಾಶವಿದೆ. ಹೀಗಾಗಿ ಎಲ್ಲಾ ದೇವಾಲಯಗಳ ಬಳಿ ನಾಮಫಲಕ ಹಾಕಬೇಕೆಂದು ಮುಖಂಡರು ಆಗ್ರಹಿಸಿದರು. ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್‌ ಭರವಸೆ ನೀಡಿದರು.

Advertisement

ಸಭೆಗೆ ಸಮರ್ಪಕವಾಗಿ ಮಾಹಿತಿ ತರದ ಕೆಳ ಹಂತದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಇಒ, ಸಭೆಗೆ ಬರುವಾಗ ಅಗತ್ಯ ದಾಖಲೆ ಇಲ್ಲದೆ ಬಂದಿರುವುದಕ್ಕೆ ನಾಚಿಕೆ ಆಗುವುದಿಲ್ಲವೇ ಎಂದು ತರಾಟೆ ತೆಗೆದುಕೊಂಡರು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌, ಠರಾವು ಅಂಗೀಕರಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲು ಕ್ರಮ ಕೈಗೊಂಡರು.

ಏಜೆನ್ಸಿ ಬದಲಾವಣೆಗೆ ಚಿಂತನೆ: ಪಟ್ಟಣದಲ್ಲಿನ ಹಳೇಯ ಅಂಬೇಡ್ಕರ್‌ ಭವನ ಕೆಡವಿ ವರ್ಷ ಕಳೆದರೂ ಕಟ್ಟಡ ನಿರ್ಮಿಸಿಲ್ಲ ಏಕೆ ಎಂದು ಮುಖಂಡರು ಪ್ರಶ್ನಿಸಿದರು. ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಮಂಡಲಿಗೆ ಟೆಂಡರ್‌ ಆಗಿದೆ. ಈವರೆಗೂ ಕಟ್ಟಡ ಪ್ರಾರಂಭಿಸಿಲ್ಲ. ಹೀಗಾಗಿ ಏಜೆನ್ಸಿ ಬದಲಾವಣೆಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ತಹಶೀಲ್ದಾರ್‌ ವಿಶ್ವನಾಥ್‌ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕಾಳಮ್ಮ, ಸಿಪಿಐ ನಿರಂಜನ್‌ ಹಾಗೂ ಪುರಸಭೆ ಸದಸ್ಯ ಶ್ರೀನಿವಾಸ್‌, ಗ್ರಾಪಂ ಸದಸ್ಯ ಕೆ.ಶ್ರೀನಿವಾಸ್‌, ಮುಖಂಡರಾದ ಶಿವಶಂಕರ್‌, ಚಲುವನಾರಾಯಣ್‌, ಧನರಾಜ್‌, ಎಸ್‌.ಟಿ.ಕೃಷ್ಣರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next