Advertisement

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ: ಕಠಿನ ಕಾನೂನು ಅಗತ್ಯ

12:05 AM Jan 02, 2023 | Team Udayavani |

ರಾಷ್ಟ್ರೀಯ ಮಹಿಳಾ ಆಯೋಗದ ವರದಿಗಳ ಪ್ರಕಾರ ಕಳೆದ ವರ್ಷ ದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳ ಕಂಡಿದೆ. 2022ರಲ್ಲಿ 30,957 ದೂರುಗಳು ದಾಖಲಾಗಿದ್ದು 2014ರಿಂದೀಚೆಗೆ ದೇಶದಲ್ಲಿ ನಡೆದ ಅತ್ಯಧಿಕ ಸಂಖ್ಯೆಯ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಾಗಿವೆ.

Advertisement

ಈ ಪೈಕಿ ಮಹಿಳಾ ಘನತೆಗೆ ಮತ್ತು ಭಾವನೆಗಳಿಗೆ ಧಕ್ಕೆ ತಂದ ಘಟನೆಗಳಿಗೆ ಸಂಬಂಧಿಸಿದಂತೆ ಅತೀ ಹೆಚ್ಚು ಅಂದರೆ 9,710 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಗೃಹ ಹಿಂಸೆಗೆ ಸಂಬಂಧಿಸಿದಂತೆ 6,970, ವರದಕ್ಷಿಣೆ ಕಿರುಕುಳದ 4,600 ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕಿರುಕುಳದ 2,523 ಪ್ರಕರಣಗಳು, 1,701 ಅತ್ಯಾಚಾರ ಪ್ರಕರಣಗಳು, ಮಹಿಳೆಯರ ವಿರುದ್ಧ ಪೊಲೀಸ್‌ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ 1,623 ಮತ್ತು ಸೈಬರ್‌ ಅಪರಾಧಗಳಿಗೆ ಸಂಬಂಧಿಸಿದಂತೆ 924 ದೂರುಗಳು ದಾಖಲಾಗಿವೆ. ಒಟ್ಟಾರೆಯಾಗಿ ದಾಖಲಾದ ಪ್ರಕರಣಗಳ ಪೈಕಿ ಉತ್ತರಪ್ರದೇಶದಲ್ಲಿ 16,872 ಅಂದರೆ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಮತ್ತು ದಿಲ್ಲಿಯಲ್ಲಿ 3,004 ಪ್ರಕರಣಗಳು ದಾಖಲಾಗಿವೆ.

ಇವೆಲ್ಲವೂ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಾದ ಪ್ರಕರಣ ಗಳ ಅಂಕಿಅಂಶಗಳಾಗಿದ್ದರೆ ಉಳಿದಂತೆ ದೇಶಾದ್ಯಂತ ಇಂಥ ಅದೆಷ್ಟೋ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ನಾನಾ ಕಾರಣಗಳಿಂದಾಗಿ ಆಯೋಗ ಅಥವಾ ಪೊಲೀಸ್‌ ಠಾಣೆಯ ಮೆಟ್ಟಿಲೇರದೆ ಇರಬಹುದು.

ಇವೆಲ್ಲವನ್ನೂ ಬದಿಗಿಟ್ಟು ನೋಡುವುದಾದರೆ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಸಂಭ್ರಮದ ವರ್ಷದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಾಗಿರುವುದು ಒಂದಿಷ್ಟು ಆತಂಕಕಾರಿ ವಿಷಯವೇ. ಅಲ್ಲದೆ ಪ್ರತಿಯೊಂದೂ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ಮಹಿಳೆಯರ ಮೇಲೆ ಇಷ್ಟೊಂದು ಸಂಖ್ಯೆಯಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆ ಎನ್ನುವುದು ಸಹಜÊ ಾ ಗಿಯೇ ದೇಶಕ್ಕೆ ಮುಜುಗರವನ್ನುಂಟು ಮಾಡುತ್ತದೆ. ವಿಶ್ವದ ಇನ್ಯಾವುದೋ ಬಡತನದಿಂದ ನರಳುತ್ತಿರುವ ಅಥವಾ ಮೂಲಭೂತವಾದಿಗಳ ಕಪಿಮುಷ್ಟಿ ಯಲ್ಲಿ ನಲುಗಿರುವ ದೇಶಗಳ ಅಂಕಿಅಂಶಗಳನ್ನು ಭಾರತದ ಅಂಕಿಅಂಶಗ ಳಿಗೆ ಹೋಲಿಸಿಯೋ ದಶಕಗಳ ಹಿಂದಿನ ಅಂಕಿಅಂಶಗಳನ್ನು ಪರಿಗಣಿಸಿದರೆ ಇದು ತೀರಾ ನಗಣ್ಯ ಎಂದು ಪ್ರತಿಪಾದಿಸಿ ನಿರ್ಲಕ್ಷಿಸಲಾಗದು.

ಕೇಂದ್ರ ಸರಕಾರ ಮಹಿಳೆಯರನ್ನು ಎಲ್ಲ ವಲಯಗಳಲ್ಲೂ ತೊಡಗಿಸಿಕೊಳ್ಳಲು ಪ್ರೇರಣೆ, ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಮಹಿಳೆಯರು ಕೂಡ ಈ ಹಿಂದಿಗಿಂತ ಹೆಚ್ಚು ಧೈರ್ಯದಿಂದ ಪ್ರತಿಯೊಂದೂ ರಂಗದಲ್ಲೂ ಮಿಂಚುತ್ತಿದ್ದಾರೆ. ಮಹಿಳೆಯರನ್ನು ಇನ್ನಷ್ಟು ಸಶಕ್ತ ಮತ್ತು ಸ್ವಾವಲಂಬಿಯಾಗಿಸಲು ಸರಕಾರದೊಂದಿಗೆ ಸಮಾಜದ ವಿವಿಧ ಸ್ವಯಂಸೇವಾ ಸಂಘಟನೆಗಳು ಕೈಜೋಡಿಸುತ್ತಲೇ ಬಂದಿವೆ. ಇಷ್ಟೆಲ್ಲ ಆದರೂ ಇನ್ನೂ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರ ವಿರುದ್ಧ ದೇಶದಲ್ಲಿ ಅಪರಾಧ ಕೃತ್ಯ, ದೌರ್ಜನ್ಯಗಳು ನಡೆಯುತ್ತಿರುವುದು ತುಸು ಅಚ್ಚರಿಯೇ ಸರಿ.

Advertisement

ಪುರುಷ-ಮಹಿಳೆ ಎಂಬ ಭೇದ-ಭಾವವಿಲ್ಲದೆ ಸಮಸಮಾಜ ನಿರ್ಮಾಣದ ಕನಸಿನೊಂದಿಗೆ ದೇಶ ಮುನ್ನಡೆಯುತ್ತಿರು ವಾಗ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳತ್ತಲೂ ಸರಕಾರ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮಹಿಳೆಯರ ವಿರುದ್ಧದ ಪ್ರತಿಯೊಂದೂ ಅಪರಾಧ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತೆಗೆ ತುರ್ತು ನ್ಯಾಯ ಒದಗಿಸಿಕೊಡುವ ಜತೆಜತೆಯಲ್ಲಿ ಮಹಿಳೆಯರ ಮೇಲೆ ಅಪರಾಧ ಕೃತ್ಯಗಳನ್ನು ಎಸಗಿದ ಅಪರಾಧಿಗಳಿಗೆ ಕಠಿನ ಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next