ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ಸಹೋದರ ಚಂದ್ರಶೇಖರ ಅವರ ವಿರುದ್ಧ ಅವರ ಸಹೋದರಿ ಬನ್ನೂರು ಗ್ರಾಮದ ಅನಿಲಕೋಡಿ ಮನೆ ನಿವಾಸಿ ವಸಂತಲಕ್ಷ್ಮಿ ನೀಡಿದ ಕ್ರಿಮಿನಲ್ ದೂರಿನಡಿ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಕಬಕ ಗ್ರಾಮ ಮತ್ತು ಪಡೂರು ಗ್ರಾಮದ ಜಮೀನಿನಲ್ಲಿ ವಸಂತಲಕ್ಷ್ಮಿ ಅವರಿಗೆ ಸಹೋದರರು ಮತ್ತು ತಾಯಿಗೆ ಪಾಲು ಇರುವುದಾಗಿ ಪುತ್ತೂರಿನ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2005 ಮತ್ತು 2015ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಈಶ್ವರ ಭಟ್ ಪಂಜಿಗುಡ್ಡೆ ಸಲ್ಲಿಸಿದ ಮೇಲ್ಮನವಿಯನ್ನು ಪುತ್ತೂರಿನ 5ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ದೂರುದಾರೆ ವಸಂತಲಕ್ಷ್ಮೀ ಸ್ವಲ್ಪ ಸಮಯದ ಹಿಂದೆ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ ಬನ್ನೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ ಮತ್ತು ಅಂದಿನ ಕಾರ್ಪೊರೇಶನ್ ಬ್ಯಾಂಕ್‌ನಲ್ಲಿ ಈ ಆಸ್ತಿಗಳನ್ನು ಆಧಾರ ಮಾಡಿ ಈಶ್ವರ ಭಟ್ ಮತ್ತು ಚಂದ್ರಶೇಖರ ತಮ್ಮ ಹೆಸರಿನಲ್ಲಿ ಸಾಲ ಪಡೆದುಕೊಂಡಿರುವುದು ಗೊತ್ತಾಯಿತು. ಇವರಿಬ್ಬರ ಪೈಕಿ ಈಶ್ವರ ಭಟ್ ಸ್ವತಃ ಬನ್ನೂರು ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷರಾಗಿದ್ದಾರೆ.
ಅವರು ಹಿಂದೆ ಈ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಮೋಸ ಮತ್ತು ವಂಚನೆಯಿಂದ ಸಾಲ ಪಡೆದುಕೊಂಡಿದ್ದಾರೆ ಎಂದು ಆಪಾದಿಸಿ ವಸಂತಲಕ್ಷ್ಮಿ ದೂರು ನೀಡಿದ್ದಾರೆ.