Advertisement
ಈ ಸಂಬಂಧ ಬ್ಯಾಡರಹಳ್ಳಿ ವಿನಾಯಕನಗರ ನಿವಾಸಿ, ಪ್ರಮುಖ ಆರೋಪಿ ರಶ್ಮಿ (30), ಆಕೆಯ ಪ್ರಿಯಕರ, ಕುಂದಾಪುರ ಮೂಲದ ಅಕ್ಷಯ್(35) ಮತ್ತು ಈತನ ಸ್ನೇಹಿತ ಪುರುಷೋತ್ತಮ್(35) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಅ.5ರಂದು ಲಕ್ಕಮ್ಮ(52) ಎಂಬುವರನ್ನು ಕೊಲೆಗೈದಿದ್ದರು. ಈ ಸಂಬಂಧ ಲಕ್ಕಮ್ಮ ಪುತ್ರ ಮಂಜುನಾಥ್ ಕೊಲೆ ಪ್ರಕರಣ ದಾಖಲಿಸಿದ್ದರು.ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಂಜುನಾಥ್ ಕೆಲ ವರ್ಷಗಳ ಹಿಂದೆ ರಶ್ಮಿ ಜತೆ ಮದುವೆಯಾಗಿದ್ದು, ಬ್ಯಾಡರಹಳ್ಳಿಯ ವಿನಾಯಕನಗರದಲ್ಲಿ 3 ಅಂತಸ್ತಿನ ಕಟ್ಟಡವೊಂದಿದ್ದು, ಕೆಳ ಮಹಡಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಮಂಜುನಾಥ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರಶ್ಮಿ ಮತ್ತು ಅತ್ತೆ ಲಕ್ಕಮ್ಮ ಚೀಟಿ ಹಾಗೂ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದರು.
ಪ್ರಿಯಕರನ ಸೂಚನೆಯಂತೆ ಅತ್ತೆಗೆ ನಿದ್ದೆ ಮಾತ್ರೆ ಹಾಕಲು ನಿರ್ಧರಿಸಿದ್ದ ರಶ್ಮಿ, ಅ.5ರಂದು ಮಧ್ಯಾಹ್ನ ರಾಗಿ ಮುದ್ದೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿ ಅತ್ತೆಗೆ ಊಟ ಕೊಟ್ಟಿದ್ದಾಳೆ. ಕೆಲ ಹೊತ್ತಿನ ಬಳಿಕ ಅತ್ತೆ ನಿದ್ದೆಗೆ ಜಾರುತ್ತಿದ್ದಂತೆ ಸಂಬಂಧಿಯೊಬ್ಬರನ್ನು ಕರೆದುಕೊಂಡು ತರಕಾರಿ ತರಲು ಹೊರಗಡೆ ಹೋಗಿದ್ದಾಳೆ. ಇದಕ್ಕೂ ಮೊದಲು ಪ್ರಿಯಕನ ವಾಟ್ಸ್‌ಆ್ಯಪ್‌ಗೆ ಅತ್ತೆ ನಿದ್ದೆ ಜಾರಿರುವ ವಿಚಾರ ತಿಳಿಸಿ, ಬಾಗಿಲು ಹಾಕದೆ ಹೋಗಿದ್ದಳು. ಬಳಿಕ ಅಕ್ಷಯ್ ತನ್ನ ಸಹೋದ್ಯೋಗಿ ಪುರುಷೋತ್ತಮ್ ಜತೆ ರಶ್ಮಿ ಮನೆಗೆ ಬಂದು ಲಕ್ಕಮ್ಮರ ಕುತ್ತಿಗೆ ಹಿಸುಕಿ ಕೊಲೆಗೈದು, ಬಾಗಿಲು ಹಾಕಿಕೊಂಡು ಹೋಗಿದ್ದ. ಕೆಲ ಹೊತ್ತಿನ ಬಳಿಕ ಮನೆಗೆ ಬಂದ ರಶ್ಮಿ, ಅತ್ತೆಯನ್ನು ಎಬ್ಬಿಸುವ ನಾಟಕವಾಡಿದ್ದಾಳೆ. ಬಳಿಕ ಪತಿಗೆ ಕರೆ ಮಾಡಿ, “ನಿಮ್ಮ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ನಂಬಿಸಿದ್ದಾಳೆ. ಅದನ್ನು ನಂಬಿದ ಮಂಜುನಾಥ್, ಸಂಬಂಧಿಕರ ಜತೆ ಸೇರಿ ಕುಣಿಗಲ್ ತಾಲೂಕಿನ ಮುದಿಗೆರೆಯ ಶೆಟ್ಟಿಪಾಳ್ಯದ ಜಮೀನಿನಲ್ಲಿ ತಾಯಿಯ ಅಂತ್ಯ ಸಂಸ್ಕಾರ ಮಾಡಿದ್ದರು ಎಂದು ಪೊಲೀಸರು ಹೇಳಿದರು.
Related Articles
Advertisement
ಸುಳಿವು ಕೊಟ್ಟ ವಾಟ್ಸ್‌ಆ್ಯಪ್ ಚಾಟ್ಈ ಮಧ್ಯೆ ಅಕ್ಷಯ್ ಸ್ನೇಹಿತ ರಾಘವೇಂದ್ರನಿಗೆ ಕೊಲೆ ಪ್ರಕರಣದಲ್ಲಿ ಅನುಮಾನ ಮೂಡಿದ್ದು, ಕೆಲ ದಿನಗಳ ಬಳಿಕ ಅಕ್ಷಯ್‌ನ ಮೊಬೈಲ್ ಪಡೆದು ವಾಟ್ಸ್‌ಆ್ಯಪ್ ಪರಿಶೀಲಿಸಿದ್ದಾರೆ. ಅಕ್ಷಯ್ ಮತ್ತು ರಶ್ಮಿ ನಡುವಿನ ವಾಟ್ಸ್‌ಆ್ಯಪ್ ಚಾಟಿಂಗ್ ಗಮನಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಅಲ್ಲದೆ, ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಕಟ್ಟಡ ಮಾಲೀಕ ಮಂಜುನಾಥ್‌ಗೆ ತೋರಿಸಿದ್ದರು. ಈ ಸಂಬಂಧ ಮಂಜುನಾಥ್, ಪತ್ನಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.