Advertisement

ದೇವರ ಮೀನು ಕಳವು: ಇಬ್ಬರ ಸೆರೆ

08:20 AM Jul 27, 2017 | Team Udayavani |

ಬೆಳ್ಳಾರೆ/ಸುಳ್ಯ: ತೊಡಿಕಾನದ ಶ್ರೀ ಮಲ್ಲಿಕಾರ್ಜುನ ದೇವಾಲಯಕ್ಕೆ ಆಗಮಿಸಿದ ತೆಲಂಗಾಣ ಮೂಲದ ವ್ಯಕ್ತಿಗಳಿಬ್ಬರು ದೇವಾಲಯಕ್ಕೆ ಸೇರಿದ ಮೀನುಗಳನ್ನು ಹಿಡಿದು ಕೊಂಡೊಯ್ಯುತ್ತಿದ್ದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಿಂಗರಾಜ (20) ಮತ್ತು ಪೋಲ್‌ರಾಜ್‌ (24) ಆರೋಪಿಗಳು. ಆರೋಪಿಗಳ ವಿರುದ್ಧ ಕಲ್ಲುಗುಂಡಿ ಹೊರ ಠಾಣಾ ಪೊಲೀಸರು ಪೆಟ್ಟಿ ಕೇಸು ದಾಖಲಿಸಿ ಬಳಿಕ ಬಿಡುಗಡೆಗೊಳಿಸಿದ್ದಾರೆ.

Advertisement

ಅವರು 15 ದಿನಗಳ ಹಿಂದೆ 4-5 ಸಲ ತೊಡಿಕಾನ ದೇಗುಲಕ್ಕೆ ಬಂದಿದ್ದರು. ಬುಧವಾರ ಮಧ್ಯಾಹ್ನ ಪೂಜೆಯ ವೇಳೆಗೆ ದೇಗುಲಕ್ಕೆ ಆಗಮಿಸಿದ್ದರು. ಬಳಿಕ ಮತ್ಸ್ಯತೀರ್ಥ ಬಳಿಗೆ ತೆರಳಿ ಮೀನು ಹಿಡಿದು ಬ್ಯಾಗ್‌ಗೆ ತುಂಬಿಸಿ ಹೊರಟ ಅವರು ಬಸ್ಸನ್ನೇರಿ ಕುಳಿತಿದ್ದರು. ಯುವಕರು ಅನುಮಾನಾಸ್ಪದವಾಗಿ ವರ್ತಿಸಿದಾಗ ಸಂಶಯಪಟ್ಟ ಸಮೀಪದ ಅಂಗಡಿಯ ಟೈಲರ್‌ ಬಿಂದು ಅವರು ದೇಗುಲ ಸಿಬಂದಿಗೆ ಮಾಹಿತಿ ನೀಡಿದರು. ತತ್‌ಕ್ಷಣ ಸಿಬಂದಿ ಆಗಮಿಸಿ ಯುವಕರ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ ಮತ್ಸ್ಯತೀರ್ಥದಿಂದ ಹಿಡಿದ ಬೃಹತ್‌ ಗಾತ್ರದ 10 ಮೀನುಗಳು ಕಂಡುಬಂದವು.

ಸ್ಥಳೀಯರು ಆರೋಪಿಗಳಿಬ್ಬರನ್ನು ಸೆರೆಹಿಡಿದು ಹಿಡಿದಿದ್ದ ಮೀನುಗಳನ್ನು ಅವರ ಕೈಯಿಂದ‌ಲೇ ನದಿ ವಠಾರದಲ್ಲಿ ಹೂಳಿಸಿದರು.ಆರೋಪಿಗಳು ತಪ್ಪುಕಾಣಿಕೆಯಾಗಿ 300 ರೂ. ಗಳನ್ನು ದೇಗುಲದ ಭಂಡಾರಕ್ಕೆ ಅರ್ಪಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಕಲ್ಲುಗುಂಡಿ ಹೊರಠಾಣಾ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಕೆಲವು ದಿನಗಳಿಂದ ನಿರಂತರವಾಗಿ ಹಳ್ಳಿ ಔಷಧ ನೀಡುವುದಾಗಿ ಪರಿಸರದಲ್ಲಿ ಸುತ್ತಾಟ ನಡೆಸುತ್ತಿದ್ದರು. ಈ ಹಿಂದೆಯೂ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಕ್ಷೇತ್ರದ ಬಗ್ಗೆ ಹಾಗೂ ಮೀನು ಹಿಡಿಯುವ ನಿಷೇಧಿತ ಪ್ರದೇಶವಾದ ಮತ್ಸ್ಯತೀರ್ಥದ ಪಾವಿತ್ರ್ಯದ ಬಗ್ಗೆಯೂ ತಿಳಿಸಲಾಗಿತ್ತು. ಪದೇ ಪದೇ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಅವರ ಚಲನವಲನಗಳ ಬಗ್ಗೆ ಸ್ಥಳೀಯರು ಕಣ್ಣಿಟ್ಟಿದ್ದರು.

ಭಕ್ತರ ನಂಬಿಕೆಯ ಮೀನು
ತೊಡಿಕಾನ ಮಲ್ಲಿಕಾರ್ಜುನ ದೇಗುಲ ಸುಳ್ಯ ಸೀಮೆ ದೇವಾಲಯವಾಗಿದ್ದು ಪ್ರಸಿದಧ ಕಾರಣೀಕ ಕ್ಷೇತ್ರ. ಇದು ತೀರ್ಥಕ್ಷೇತ್ರವಾಗಿ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದಿದೆ. ದಿನ ನಿತ್ಯ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದ ಮತ್ಸ್ಯತೀರ್ಥ ಹೊಳೆಯ ಗುಂಡಿಯಲ್ಲಿ ಸಾವಿರಾರು ದೇವರ ಮೀನುಗಳಿವೆ. ಅದನ್ನು ದೇವಾಲಯದ ವತಿಯಿಂದ ಆರೈಕೆ ಮಾಡಲಾಗುತ್ತಿದೆ. ಈ ಮೀನುಗಳನ್ನು ಊರಿನಲ್ಲಿ ತಿನ್ನುವುದನ್ನು ನಿಷೇಧಿಸಲಾಗಿದೆ. ಕಟ್ಟುಪಾಡು ಮೀರಿ ಈ ಮೀನನ್ನು ತಿಂದರೆ ಆ ವ್ಯಕ್ತಿ ಸಮಸ್ಯೆಗೊಳಗಾಗುತ್ತಾನೆ ಎಂಬ ಇಲ್ಲಿನ ನಂಬಿಕೆ ಭಕ್ತರಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next