ಹುಬ್ಬಳ್ಳಿ: ಕೊರೊನಾ ಮಹಾಮಾರಿ ಸಂಕಷ್ಟದ ನಡುವೆಯೂ ಅವಳಿನಗರ ವ್ಯಾಪ್ತಿಯಲ್ಲಿ ಅಪರಾಧ ಚುಟುವಟಿಕೆಗಳು, ಸೈಬರ್ ಅಪರಾಧ ಪ್ರಕರಣಗಳು ಸದ್ದು ಮಾಡತೊಡಗಿವೆ. ಕೊರೊನಾ ಮಹಾಮಾರಿ ಆರ್ಥಿಕ ಸಂಕಷ್ಟ, ಉದ್ಯೋಗ ನಷ್ಟ, ಉದ್ಯಮ-ವ್ಯಾಪಾರ ನಷ್ಟ, ವೈದ್ಯಕೀಯ ವೆಚ್ಚ ಹೆಚ್ಚಳಕ್ಕೆ ಕಾರಣವಾಗುವುದರ ಜತೆಗೆ ಕಳ್ಳತನ, ವಂಚನೆ, ಅಪಹರಣ, ದರೋಡೆ, ಸುಲಿಗೆ ಹಾಗೂ ಕೊಲೆಯಂತಹ ಪ್ರಕರಣಗಳಿಗೂ ಇಂಬು ನೀಡುತ್ತಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕಳೆದ ವರ್ಷದಲ್ಲಿ ನಡೆದಿರುವ ಅಪರಾಧ ಪ್ರಕರಣಗಳು ಹಾಗೂ ಈ ವರ್ಷ ಇಲ್ಲಿಯವರೆಗೆ ನಡೆದ ಅಪರಾಧ ಪ್ರಕರಣಗಳನ್ನು ಗಮನಿಸಿದರೆ ಇಂತಹ ಅನುಮಾನ ವ್ಯಕ್ತವಾಗುತ್ತಿದೆ. ಕೋವಿಡ್ ಸಂಕಷ್ಟದ ನಡುವೆಯೇ ಕಳ್ಳತನ, ವಂಚನೆ, ಸುಲಿಗೆ-ದರೋಡೆಯಂತಹ ಪ್ರಕರಣಗಳು, ಆರ್ಥಿಕ ಅಪರಾಧಗಳು ಹೆಚ್ಚಬಹುದು ಎಂಬ ಹಲವರ ನಿರೀಕ್ಷೆ ನಿಜವಾಗುತ್ತಿದೆ.
ಇತ್ತೀಚೆಗಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಸಹ ಹೆಚ್ಚತೊಡಗಿದ್ದು, ಕಳೆದ ವರ್ಷದಲ್ಲಿ ನಡೆದ ಸೈಬರ್ ಪ್ರಕರಣಗಳನ್ನು ಮೀರಿಸುವ ರೀತಿಯಲ್ಲಿ ಈ ವರ್ಷದಲ್ಲಿ ಸೈಬರ್ ಅಪರಾಧ ಪ್ರಕರಣಗಳು ನಡೆದಿವೆ. ಅಪರಾಧ ಸಂಖ್ಯೆ ತುಲನೆ: ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2020ರಲ್ಲಿ 15 ಕೊಲೆಗಳು ನಡೆದಿದ್ದರೆ, 2021ರ ಜೂನ್ ಅಂತ್ಯದ ವರೆಗೆ 7 ಕೊಲೆಗಳಾಗಿವೆ. ಅದರಂತೆ ಕೊಲೆ ಯತ್ನ ಪ್ರಕರಣಗಳು 2020ರಲ್ಲಿ 42 ಆಗಿದ್ದರೆ, 2021ರ ಜೂನ್ ಅಂತ್ಯದ ವರೆಗೆ ಕೇವಲ ಆರು ತಿಂಗಳಲ್ಲಿ 30 ಆಗಿವೆ. 2021ರಲ್ಲಿ ಒಂದು ದರೋಡೆ ಪ್ರಕರಣ ದಾಖಲಾಗಿದೆ. ಸುಲಿಗೆ ಪ್ರಕರಣಗಳು 2020ರಲ್ಲಿ 31 ಆಗಿದ್ದರೆ, 2021ರಲ್ಲಿ ಆರು ತಿಂಗಳಲ್ಲಿ 23 ಆಗಿವೆ. 2020ರಲ್ಲಿ 102 ಮನೆಗಳ್ಳತನ ನಡೆದಿದ್ದರೆ, 2021ರ ಜೂನ್ ವರೆಗೆ ಅಂದರೆ ಆರು ತಿಂಗಳಲ್ಲಿ 83 ಮನೆಗಳು ಕಳ್ಳತನವಾಗಿವೆ. ಇದರಲ್ಲಿ 2020ರಲ್ಲಿ ಹಗಲು ಹೊತ್ತಿನಲ್ಲಿ 12 ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿದ್ದರೆ, 2021ರಲ್ಲಿ ಐದು ಮನೆಗಳ ಕೀಲಿ ಮುರಿದು ಕಳ್ಳತನ ಮಾಡಲಾಗಿದೆ.
ರಾತ್ರಿ ಹೊತ್ತಿನಲ್ಲಿ 2020ರಲ್ಲಿ 79 ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿದ್ದರೆ, 2021ರಲ್ಲಿ ಆರು ತಿಂಗಳಲ್ಲಿಯೇ 62 ಮನೆಗಳ ಕೀಲಿ ಮುರಿದು ಕಳವು ಮಾಡಲಾಗಿದೆ. 2020ರಲ್ಲಿ 11 ಮನೆಗಳ್ಳತನವಾಗಿದ್ದರೆ, 2021ರಲ್ಲಿ ಆಗಲೇ 16 ಮನೆಗಳ್ಳತನವಾಗಿವೆ. ಇನ್ನುಳಿದಂತೆ 2020ರಲ್ಲಿ 47 ಸಾಮಾನ್ಯ ಕಳ್ಳತನವಾಗಿದ್ದರೆ, 2021ರಲ್ಲಿ ಈಗಾಗಲೇ 53 ಕಳ್ಳತನವಾಗಿವೆ. 2020ರಲ್ಲಿ 184 ವಾಹನಗಳು ಕಳ್ಳತನವಾಗಿದ್ದರೆ, 2021ರಲ್ಲಿ 94 ವಾಹನಗಳು ಕಳವು ಆಗಿವೆ. 2020ರಲ್ಲಿ 57 ವಂಚನೆಗಳು ನಡೆದಿದ್ದರೆ, 2021ರಲ್ಲಿ ಈವರೆಗೆ 45 ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಂತೆ 2020ರಲ್ಲಿ ಎರಡು ನಕಲು ಪ್ರಕರಣಗಳಾಗಿದ್ದರೆ, 2021ರ ಜೂನ್ ವರೆಗೆ 10 ಪ್ರಕರಣಗಳಾಗಿವೆ. ಅಪಹರಣ ಪ್ರಕರಣಗಳು 2020ರಲ್ಲಿ 26 ಆಗಿದ್ದರೆ, 2021ರಲ್ಲಿ 19 ಆಗಿವೆ.
2020ರಲ್ಲಿ ರೇಪ್ ಪ್ರಕರಣಗಳು 5 ಆಗಿದ್ದರೆ, 2021ರಲ್ಲಿ 10 ಆಗಿವೆ. ಮಾದಕ ವಸ್ತು (ಎನ್ ಡಿಪಿಎಸ್) ಪ್ರಕರಣಗಳು 2020ರಲ್ಲಿ 24 ಆಗಿದ್ದರೆ, 2021ರಲ್ಲಿ 34 ಆಗಿವೆ. ಸೈಬರ್ ಕ್ರೈಂ ಅಪರಾಧಗಳು 2020ರಲ್ಲಿ 120 ಆಗಿದ್ದರೆ, 2021ರಲ್ಲಿ ಜೂನ್ ಅಂತ್ಯದವರೆಗೆ 90 ಆಗಿವೆ.