ಕೋಲಾರ: ನಗರ ಠಾಣೆ, ಗಲ್‌ಪೇಟೆ ಪೊಲೀಸ್ ಠಾಣೆಗಳ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ನಗರದ ಗಾಂಧಿ ವನದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಚಾಲನೆ ನೀಡಿದರು.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಸುವರ್ಣ ಸೆಂಟ್ರಲ್ ಶಾಲೆ, ಮಹಿಳಾ ಸಮಾಜ, ಬಿಎಂಎಸ್ ಹಾಗೂ ಮೆಥೋಡಿಸ್ಟ್ ಶಾಲೆಗಳ ವಿದ್ಯಾರ್ಥಿಗಳು ಎಂಜಿ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ಜಾಥಾ ಮುಕ್ತಾಯಗೊಳಿಸಲಾಯಿತು.
ಈ ವೇಳೆ ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ಜಾಥಾ ಉದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ಚೌಡಪ್ಪ, ಶಾಲಾ-ಕಾಲೇಜು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಅಪರಾಧ ತಡೆ ಮಾಸಾಚರಣೆ ಮಾಡಲಾಗುತ್ತಿದೆ ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಶಾಲಾ- ಕಾಲೇಜುಗಳ ಬಳಿ ಯಾರಾದರೂ ಅಪರಿಚಿತರು ಕಂಡುಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಡ್ರಗ್ಸ್ ಸೇರಿದಂತೆ ಮಾಧಕ ವಸ್ತುಗಳ ಬಗ್ಗೆಯೂ ಸಾಕಷ್ಟು ಎಚ್ಚರಿಕೆವಹಿಸಬೇಕು. ಯಾರಾದರೂ ಅಂತಹ ವಸ್ತುಗಳನ್ನು ನೀಡುವುದು ಕಂಡುಬಂದರೂ ತಕ್ಷಣ ನಿಮ್ಮ ಶಿಕ್ಷಕರು ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೋಲಾರ ನಗರ ವೃತ್ತ ನಿರೀಕ್ಷಕ ಫಾರೂಖ್‌ಪಾಷ, ನಗರಠಾಣೆ ಪಿಎಸ್‌ಐ ಅಣ್ಣಯ್ಯ, ಗಲ್‌ಪೇಟೆ ಪಿಎಸ್‌ಐ ಪ್ರದೀಪ್ ಸಿಂಗ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.