ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್) ಸಿಬ್ಬಂದಿ ಶುಕ್ರವಾರ ರಾತ್ರಿ ನಿಲ್ದಾಣದಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿತು.
ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತ ಡಾ| ವಿ.ಸಿ. ಮಲ್ಲಿಕಾರ್ಜುನ ನೇತೃತ್ವದಲ್ಲಿ ಟಿಕೆಟ್ ತಪಾಸಣಾ ಸಿಬ್ಬಂದಿ ಸಹಾಯದಿಂದ ಅನಧಿಕೃತ ವ್ಯಕ್ತಿ ಹಾಗೂ ನಿಲ್ದಾಣದ ಆವರಣದಲ್ಲಿ ಸಾಮಾಜಿಕ ವಿರೋಧಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ತಪಾಸಣೆ ನಡೆಸಿತು.
ಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಕರಿಗೆ ಕಳ್ಳರಿಂದ ಜಾಗೃತರಾಗುವಂತೆ ತಿಳಿವಳಿಕೆ ನೀಡಿದರು. ಅಂಗವಿಕಲರು ಹಾಗೂ ಮಹಿಳೆಯರಿಗೆ ಮೀಸಲಾದ ಬೋಗಿಗಳನ್ನು ತಪಾಸಣೆ ಮಾಡಿದರು. ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಅನಧಿಕೃತ ಪ್ರಯಾಣಿಕರನ್ನು ಸಾಮಾನ್ಯ ಬೋಗಿಗಳಿಗೆ ತೆರಳುವಂತೆ ಸೂಚಿಸಿದರು.
ಜೊತೆಗೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಕಿಟಕಿಯ ಬಳಿ ವ್ಯಾನಿಟಿ ಬ್ಯಾಗ್ ಇಡದಂತೆ ಹಾಗೂ ಕಿಟಕಿ ಬಳಿ ಉಪೇಕ್ಷಿತವಾಗಿ ಕುಳಿತುಕೊಳ್ಳಬಾರದೆಂದು ತಿಳಿಸಿದರು. ವಿಶ್ರಾಂತಿ ಕೊಠಡಿ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ತಪಾಸಣೆ ನಡೆಸಿದರು. ಅನಧಿಕೃತ ಪ್ರಯಾಣಿಕರನ್ನು ನಿಲ್ದಾಣದ ಆವರಣದಿಂದ ಹೊರಗಡೆ ಕಳುಹಿಸಿದರು.
ಈ ಸಂದರ್ಭದಲ್ಲಿ ಶ್ವಾನದಳ ಮೂಲಕವೂ ತಪಾಸಣೆ ನಡೆಸಲಾಯಿತು. ಆರ್‌ಪಿಎಫ್ ನವರು ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್, ಗೋಲಗುಂಬಜ್ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ವಿಜಯವಾಡ ಪ್ಯಾಸೆಂಜರ್ ಮತ್ತು ಹುಬ್ಬಳ್ಳಿ-ಮಿರಜ್ ಎಕ್ಸ್‌ಪ್ರೆಸ್ ರೈಲುಗಳ ಬೋಗಿಗಳನ್ನು ತಪಾಸಣೆ ನಡೆಸಿದರು. ಆರ್‌ಪಿಎಫ್‌ನ ಹುಬ್ಬಳ್ಳಿ ವಿಭಾಗ ತಂಡ ಏಪ್ರಿಲ್‌ನಿಂದ ಅಕ್ಟೋಬರ್ ವರೆಗೆ 4266 ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ, ರೈಲ್ವೆಯ ವಿವಿಧ ಕಾಯ್ದೆಯಡಿ 14,92,731 ರೂ. ದಂಡ ವಿಧಿಸಿದೆ.
ಇದೇ ವೇಳೆ ಪ್ರಯಾಣಿಕರು ಕಳೆದುಕೊಂಡಿದ್ದ ಅಂದಾಜು 3,57,700 ರೂ. ಮೌಲ್ಯದ ವಸ್ತುಗಳುಳ್ಳ ಬ್ಯಾಗ್‌ಗಳನ್ನು ಮರಳಿ ಕೊಟ್ಟಿದೆ. ಜೊತೆಗೆ ಸುರಕ್ಷಿತ ಪ್ರಯಾಣಕ್ಕೆ ಉಚಿತ ಸಹಾಯವಾಣಿ ಸಂಖ್ಯೆ 182 ಬಳಸಬೇಕೆಂದು ಪ್ರಯಾಣಿಕರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.