ಕಾಸರಗೋಡು: ಹದಿನಾರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲತಂದೆಗೆ ಹೊಸದುರ್ಗ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 107 ವರ್ಷ ಸಜೆ ಹಾಗೂ 4,25,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲತಃ ಇಡುಕ್ಕಿ ನಿವಾಸಿ ಹಾಗೂ ಈಗ ಉದುಮ ಬಾರದ ಕುಳಿಕುನ್ನಿಲ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ ಈ ಶಿಕ್ಷೆ ವಿಧಿಸಲಾಗಿದೆ.
376(3), 376(2), (ಎನ್), 376(2)(ಎಫ್), ಐಪಿಸಿ ಆ್ಯಂಡ್ ಆರ್ ಡಬ್ಲ್ಯು 5(1), 6-ಆರ್/ಡಬ್ಲ್ಯು 5(ಎನ್) ಪ್ರಕಾರದ ಐದು ಸೆಕ್ಷನ್‌ಗಳಲ್ಲಾಗಿ ಆರೋಪಿಗೆ ತಲಾ 20 ವರ್ಷದಂತೆ ಸಜೆ ಹಾಗೂ 75,000 ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.
ಮಾತ್ರವಲ್ಲ ಪೋಕ್ಸೋ ಕಾನೂನು ಪ್ರಕಾರ ಆರೋಪಿಗೆ ಏಳು ವರ್ಷ ಸಜೆ ಹಾಗೂ 50,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.
ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಬಹುದೆಂದೂ, ಅದರಿಂದಾಗಿ ಒಟ್ಟು 27 ವರ್ಷ ಸಜೆ ಹಾಗೂ ಒಟ್ಟು 4,25,000 ರೂ. ದಂಡ ಪಾವತಿಸಬೇಕಾಗಿದೆ.
2012ರಿಂದ 2018ರ ಅವಧಿಯಲ್ಲಿ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದನೆಂಬ ದೂರಿನಂತೆ ಬಾಲಕಿಯ ಮಲತಂದೆಯ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದರು.
ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಕೇರಳ ರಾಜ್ಯದಲ್ಲೇ ನೀಡಲಾದ ಅತೀ ದೊಡ್ಡ ಶಿಕ್ಷೆಯಾಗಿದೆ.