Advertisement

ಮರ ಕಡಿಯುತ್ತಿದ್ದಾಗ ವಿದ್ಯುತ್‌ ಸ್ಪರ್ಶವಾಗಿ ಕಾರ್ಮಿಕ ಸಾವು; ತೋಟದಲ್ಲೇ ಹೂತು ಹಾಕಿರುವ ತಂಡ

12:02 AM Feb 06, 2022 | Team Udayavani |

ಕುಂಬಳೆ: ಪೈವಳಿಕೆ ಪಂಚಾಯತ್‌ನ ಕನಿಯಾಲ ಮುಂಡೋಳಿ ಎಂಬಲ್ಲಿ ಝಾರ್ಖಂಡ್‌ ಮೂಲದ ಕೂಲಿ ಕಾರ್ಮಿಕನೋರ್ವನ ಮೃತ ದೇಹವನ್ನು ಅಡಿಕೆ ತೋಟದಲ್ಲಿ ಹೂತು ಹಾಕಿದ ಪ್ರಕರಣವನ್ನು ಮಂಜೇಶ್ವರ ಪೊಲೀಸರು ಬಯಲಿಗೆಳೆದಿದ್ದು, ತೋಟದ ಮಾಲಕನ ಭಾವ ಹಾಗೂ ಕೆಲವು ಕಾರ್ಮಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಈ ಪ್ರಕರಣ ಶುಕ್ರವಾರ ಬಯಲಿಗೆ ಬಂದಿತ್ತು.

Advertisement

ಪ್ರಕರಣದ ವಿವರ
ಸ್ಥಳೀಯ ನಿವಾಸಿ ವಿಶ್ವನಾಥ ಭಟ್ಟ ಎಂಬವರ ಭಾವನ ಅಡಿಕೆ ತೋಟದಲ್ಲಿ ಡಿ. 25ರಂದು ಝಾರ್ಖಂಡ್‌ ಮೂಲದ ಶಿವಚಂದ್‌ (35) ಎಂಬವರು ಕೊಳದ ಬಳಿಯ ಮರವೊಂದನ್ನು ಕಡಿಯುತ್ತಿದ್ದಾಗ ಕೊಂಬೆ ಮುರಿದು ವಿದ್ಯುತ್‌ ಕಂಬಕ್ಕೆ ಬಡಿದಿತ್ತು. ಪರಿಣಾಮ ವಿದ್ಯುತ್‌ ಆಘಾತಕ್ಕೊಳಗಾಗಿ ಅವರು ಸಾವಿಗೀಡಾಗಿರುವುದಾಗಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ.

ಇಡೀ ಘಟನೆಯಿಂದ ಕಂಗೆಟ್ಟ ತೋಟದ ಕೆಲಸ ಮಾಡಿಸುತ್ತಿದ್ದ ವ್ಯಕ್ತಿ ಹಾಗೂ ಇತರ ಕಾರ್ಮಿಕರು ಶವವನ್ನು ಅಲ್ಲೇ ಹೂತು ಹಾಕಿ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದ್ದರು. ಮೃತನ ಸಂಬಂಧಿಯೂ ಆಗಿರುವ ಸಂಜಯ ಮತ್ತು ಇತರ 14 ಮಂದಿ ಕೂಲಿಯಾಳುಗಳ ತಂಡವು ತೋಟದ ಮಾಲಕರ ಜತೆ ಸೇರಿ ಶವವನ್ನು ಹೂತು ಹಾಕಿ ಅದರ ಮೇಲೆ ತೆಂಗಿನ ಸಸಿಯನ್ನು ನೆಟ್ಟಿದ್ದರು.

ಶಿವಚಂದ್‌ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ಝಾರ್ಖಂಡ್‌ ಮೂಲದ ಕಾರ್ಮಿಕರಲ್ಲಿ ತೀವ್ರ ಚರ್ಚೆ ನಡೆಯುತ್ತಿತ್ತು. ಚರ್ಚೆ ತೀವ್ರ ಸ್ವರೂಪ ಪಡೆದು ಭಟ್ಟರ ಮೇಲೆ ಸಂಶಯ ವ್ಯಕ್ತವಾಗುವ ವರೆಗೆ ತಲುಪಿತ್ತು. ಪರಿಣಾಮ ಫೆ. 4ರಂದು ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದಾಗ ಗುಟ್ಟು ಬಯಲಾಗಿದೆ.

ಶವ ಮೇಲೆತ್ತಲು ಚಿಂತನೆ
ಪ್ರಸ್ತುತ ಘಟನಾ ಸ್ಥಳದಲ್ಲಿ ಇನ್‌ಸ್ಪೆಕ್ಟರ್‌ ಕೆ. ಸಂತೋಷ್‌ ಕುಮಾರ್‌ ಅವರು ಪೊಲೀಸ್‌ ಕಾವಲು ಏರ್ಪಡಿಸಿದ್ದಾರೆ. ಶನಿವಾರ ಮೃತದೇಹವನ್ನು ಕಂದಾಯ ಅಧಿಕಾರಿಗಳು ಮತ್ತು ವಿಧಿ ವಿಜ್ಞಾನ ತಂಡದ ಸಮ್ಮುಖದಲ್ಲಿ ಮೇಲಕ್ಕೆತ್ತಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಶನಿವಾರ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಸಾವಿಗೀಡಾದ ಯುವಕನ ಮನೆಯವರು ಝಾರ್ಖಂಡಿನಿಂದ ಆಗಮಿಸಿದ ಬಳಿಕ ಅವರ ಸಮ್ಮುಖದಲ್ಲೇ ಮೃತದೇಹವನ್ನು ಮೇಲೆತ್ತುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸರನ್ನು ಸಂಪರ್ಕಿಸಿದಾಗ, ಕೆಲವು ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Advertisement

ಹೈನುಗಾರಿಕೆ ಕೆಲಸಕ್ಕಾಗಿ ಬಂದಿದ್ದರು
ಝಾರ್ಖಂಡ್‌ನ‌ ಈ ಕಾರ್ಮಿಕರು ಭಟ್ಟರ ಮನೆಯಲ್ಲಿ ಹೈನುಗಾರಿಕೆ ಕೆಲಸಕ್ಕಾಗಿ ಎರಡು ತಿಂಗಳ ಹಿಂದೆ ಆಗಮಿಸಿದ್ದರು. ಈ ನಡುವೆ ದುರಂತ ಸಂಭವಿಸಿದೆ. ಪ್ರಸ್ತುತ ಕಾರ್ಮಿಕರು ಹಾಗೂ ಸ್ಥಳದ ಮಾಲಕರ ಭಾವ ಗೊಂದಲದ ಹೇಳಿಕೆ ನೀಡುತ್ತಿದ್ದು, ಅವು ಪರಸ್ಪರ ತಾಳೆಯಾಗುತ್ತಿಲ್ಲ. ಆದ್ದರಿಂದ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next