Advertisement

ಹೂತು ಹಾಕಿದ್ದ ಶವ ಮರಣೋತ್ತರ ಪರೀಕ್ಷೆಗೆ

09:54 PM Feb 06, 2022 | Team Udayavani |

ಕುಂಬಳೆ: ಕನಿಯಾಲ ಮುಂಡೋಳಿಯಲ್ಲಿ ಅಡಿಕೆ ತೋಟದಲ್ಲಿ ಹೂತು ಹಾಕಿದ್ದ ಝಾರ್ಖಂಡ್‌ ಮೂಲದ ಕೂಲಿ ಕಾರ್ಮಿಕ ಶಿವಚಂದ್‌ ಮೃತದೇಹವನ್ನು ರವಿವಾರ ಮೇಲೆತ್ತಲಾಯಿತು.

Advertisement

ಕಂದಾಯ ಅಧಿಕಾರಿ ಆಂಡೊ ಪಿ. ಜೆ., ವಿಧಿವಿಜ್ಞಾನ ತಂಡದ ಅಧಿಕಾರಿ ದೀಪ್ನಾ, ಆರೋಗ್ಯ ಅಧಿಕಾರಿ ಡಾ| ರೋಹಿತ್‌, ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್‌, ಮಂಜೇಶ್ವರ ಸಿಐ ಸಂತೋಷ್‌, ಎಸ್‌ಐ ಅನ್ಸಾರ್‌ ಮುಂತಾದವರ ಸಮ್ಮುಖದಲ್ಲಿ ಶವವನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಒಯ್ಯಲಾಯಿತು.

ಸ್ಥಳೀಯ ನಿವಾಸಿ ವಿಶ್ವನಾಥ ಭಟ್‌ ಅವರು ತಮ್ಮ ಭಾವ ಗೋವಿಂದ ಭಟ್ಟರ ಅಡಿಕೆ ತೋಟದಲ್ಲಿ ಡಿ. 25ರಂದು ಮರವೊಂದನ್ನು ಕಡಿಸಿದ್ದರು. ಮರದ ಕೊಂಬೆ ಮುರಿದು ವಿದ್ಯುತ್‌ ಕಂಬಕ್ಕೆ ತಾಗಿ ಆಘಾತಕ್ಕೊಳಗಾಗಿ ಸಾವು ಸಂಭವಿಸಿರುವುದಾಗಿ ಪ್ರಥಮ ಹಂತದ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ ಅದು ವಿಶ್ವಾಸಾರ್ಹವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಟ್ಟರ ಭಿನ್ನ ಹೇಳಿಕೆ
ಡಿ.23ರಂದು ತಾನು ಕಾರ್ಯ ಕ್ರಮವೊಂದಕ್ಕೆ ತೆರಳಿದ್ದಾಗ ಕಾರ್ಮಿಕ ನೋರ್ವ ನನಗೆ ಮೊಬೈಲ್‌ ಕರೆ ಮಾಡಿ, ಶಿವಚಂದ್‌ ತೋಡಿನ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಶವವನ್ನು ತೋಡಿನಲ್ಲಿ ಹೂಳುವುದಾಗಿ ತಿಳಿಸಿದ್ದ. ನಾನು ಡಿ.24ಕ್ಕೆ ಬಂದಾಗ ಶವವನ್ನು ತೋಟದಲ್ಲಿ ಹೂತಿರುವುದಾಗಿ ಕಂಡು ಬಂತು ಎಂಬುದಾಗಿ ಭಟ್ಟರು ಹೇಳಿದರು.

ಹೆಚ್ಚಿದ ಸಂಶಯ
ಈ ರೀತಿಯ ಭಿನ್ನ ಹೇಳಿಕೆಗಳಿಂದ ಸಾವಿನ ಬಗ್ಗೆ ಸಂಶಯ ಬಲವಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ನಿಜಾಂಶ ಹೊರಬರಲಿದೆ. ಶರ್ಟ್‌ಪ್ಯಾಂಟ್‌ ಧರಿಸಿದ್ಧ ಶವವನ್ನು ಗೋಣಿಯಲ್ಲಿ ಸುತ್ತಿ ಹೂಳಲಾಗಿದೆ.

Advertisement

ಶಂಕಿತ ಆರೋಪಿಗಳ ಬಿಡುಗಡೆ
ಮಂಜೇಶ್ವರ ಪೊಲೀಸರು ವಿಚಾರಣೆ ಗಾಗಿ ವಶಕ್ಕೆ ಪಡೆದಿದ್ದ ವಿಶ್ವನಾಥ ಭಟ್‌ ಮತ್ತು ಇತರ ಕಾರ್ಮಿಕರನ್ನು ತನಿಖೆ ನಡೆಸಿ ಷರತ್ತಿನಲ್ಲಿ ಬಿಡುಗಡೆ ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ಮೃತದೇಹವನ್ನು ಹೂತು ಹಾಕಿದ್ದಾರೆ ಎಂದು ಹೇಳಲಾಗಿರುವ ಝಾರ್ಖಂಡ್‌ ಮೂಲದ ಕೂಲಿ ಕಾರ್ಮಿಕರಿಂದಲೇ ಈಗ ಅದನ್ನು ಹೊರಕ್ಕೆ ತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next