Advertisement

ಕೊಳಕೇರಿ ದರೋಡೆ: ಮಹಿಳೆ ಸೇರಿ ನೇಪಾಲ ಮೂಲದ ಐವರ ಬಂಧನ

11:19 PM Feb 25, 2022 | Team Udayavani |

ಮಡಿಕೇರಿ: ನಾಪೋಕ್ಲುವಿನ ಕೊಳಕೇರಿ ಗ್ರಾಮದ ಮೂಟೇರಿ ಎಂಬಲ್ಲಿ ಇಬ್ಬರು ಮಹಿಳೆಯರಿಗೆ ಜೀವ ಬೆದರಿಕೆಯೊಡ್ಡಿ ದರೋಡೆ ನಡೆಸಿದ ಪ್ರಕರಣವನ್ನು ಬೇಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ನೇಪಾಲ ಮೂಲದ ಐವರನ್ನು ಬಂಧಿಸಲಾಗಿದ್ದು, ಹಣ ಮತ್ತು ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ದಿಲ್‌ ಬಹದ್ದೂರು ರಾಹುಲ್‌ (51), ಈಶ್ವರ್‌ ಥಾಪಾ (48), ಪ್ರೇಮ್‌ ಬಹದೂರ್‌  (30), ಸುದೀಪ್‌ ಜೆತಾರ (20) ಹಾಗೂ ಕಮಲ ಸಿಂಗ್‌ (32) ಬಂಧಿತ ಆರೋಪಿಗಳು.

Advertisement

ಬಂಧಿತರಿಂದ 99 ಗ್ರಾಂ. ಚಿನ್ನಾಭರಣಗಳು ಮತ್ತು 42,500 ರೂ. ನಗದು ಸೇರಿದಂತೆ ಒಟ್ಟು 5,42,500 ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಪೋಕ್ಲು ಪೊಲೀಸ್‌ ಠಾಣಾ ವ್ಯಾಪ್ತಿಯ ಇಬ್ಬರು ವೃದ್ಧ ಮಹಿಳೆಯರು ವಾಸವಾಗಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ ಆರೋಪಿಗಳು ಮಹಿಳೆಯರನ್ನು ಬೆದರಿಸಿ, ಕಟ್ಟಿಹಾಕಿ, ಹಲ್ಲೆ ಮಾಡಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದರು. ಈ ಬಗ್ಗೆ ಜಾನಕಿ ಅವರು ನೀಡಿದ ದೂರಿನ ಹಿನ್ನೆಲೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಗುರುತಿನ ಚೀಟಿ ಪಡೆಯಿರಿ
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಯೋವೃದ್ಧರು ವಾಸವಿರುವ ಮನೆಗಳು ಹಾಗೂ ಒಂಟಿ ಮನೆಗಳ ಮೇಲೆ ಚೋರರ ದಾಳಿಯಾಗುತ್ತಿದೆ. ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದ ಕೂಲಿ ಕೆಲಸಗಾರರು ಆರೋಪಿಗಳಾಗಿರುವುದು ಕಂಡುಬಂದಿದೆ. ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಗುರುತಿನ ಚೀಟಿ ಪಡೆಯದೆ ಇದ್ದಲ್ಲಿ ಅಪರಿಚಿತ ವ್ಯಕ್ತಿಗಳು ಅಪರಾಧ ಕೃತ್ಯಗಳನ್ನು ನಡೆಸಿ ತಲೆಮರೆಸಿಕೊಳ್ಳುವುದು ಸುಲಭವಾಗುತ್ತದೆ. ಆದ್ದರಿಂದ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ತಪ್ಪದೇ ಗುರುತು ಚೀಟಿ ಹಾಗೂ ಭಾವಚಿತ್ರಗಳನ್ನು ಪಡೆದುಕೊಳ್ಳುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next