Advertisement

Crime: ಸುಪಾರಿ ಕೊಟ್ಟು ಪತ್ನಿಯ ಕೊಂದು ಶವವನ್ನು ನೇಣುಬಿಗಿದಿದ್ದ ಪತಿ!

12:33 PM Feb 10, 2024 | Team Udayavani |

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಸ್ನೇಹಿತನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಆತ್ಮಹತ್ಯೆ ಎಂದು ಬಿಂಬಿ ಸಿದ್ದ ಪತಿ ಹಾಗೂ ಆತನ ಸ್ನೇಹಿತ ಮಹಾಲಕ್ಷ್ಮೀಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮಹಾಲಕ್ಷ್ಮೀಲೇಔಟ್‌ನ ಶ್ರೀಕಂಠೇಶ್ವರನಗರದ ನಿವಾಸಿ ಶಿವಶಂಕರ್‌ (44), ಆತನ ಸ್ನೇಹಿತ ಹುಣಸಮಾರನಹಳ್ಳಿಯ ನಿವಾಸಿ ವಿನಯ್‌ (35) ಬಂಧಿತರು. ಪುಷ್ಪಲತಾ (40) ಕೊಲೆಯಾದ ಗೃಹಿಣಿ.

ಕೆಲ ವರ್ಷಗಳ ಹಿಂದೆ ಪುಷ್ಪಲತಾ ಅವರನ್ನು ಶಿವಶಂಕರ್‌ ವಿವಾಹವಾಗಿದ್ದರು. ಶಿವಶಂಕರ್‌ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದರೆ, ಪುಷ್ಪಲತಾ ಗೃಹಿಣಿಯಾಗಿ ದ್ದರು. ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ನಂತರ ಪತ್ನಿ ಬೇರೆಯವರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಹೊಂದಿದ್ದ. ಈ ವಿಚಾರಕ್ಕೆ ಪತ್ನಿ ಜೊತೆಗೆ ಜಗಳ ಮಾಡುತ್ತಿದ್ದ. ಪತ್ನಿಯ ಶೀಲ ಶಂಕಿಸಿ ಆಕೆಯ ಚಲನವಲನ ಗಮನಿಸಲೆಂದೇ ಪತ್ನಿಯ ಗಮನಕ್ಕೆ ಬಾರದಂತೆ ಮನೆಯೊಳಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದ. ಪತ್ನಿಯು ಬೇರೆಯವರ ಜತೆಗೆ ಸಂಬಂಧ ಹೊಂದದೇ ಇದ್ದರೂ ಶಿವಶಂಕರ್‌ಗೆ ಅನುಮಾನ ಹೋಗಿರಲಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದ.

ವಿವಿಧೆಡೆ ಮಾಟ-ಮಂತ್ರ ಮಾಡಿಸುವ ಮೂಲಕ ಪತ್ನಿಯ ಕೊಲೆಗೆ ಯತ್ನಿಸಿದ್ದರೂ ಅದು ಫ‌ಲ ನೀಡಿರಲಿಲ್ಲ. ನಂತರ ಸ್ವೀಟ್‌ನಲ್ಲಿ ಯಾವುದೋ ರಾಸಾಯನಿಕ ಬೆರೆಸಿ ಕೊಟ್ಟಿದ್ದ. ಆದರೂ, ಪತ್ನಿ ಸಾಯದೇ ಹೋಗಿದ್ದರಿಂದ ರೋಸಿ ಹೋಗಿದ್ದ.

ಕತ್ತು ಬಿಗಿದು ಗೃಹಿಣಿ ಹತ್ಯೆ: ಸ್ನೇಹಿತ ವಿನಯ್‌ ಬಳಿ ಶಿವಶಂಕರ್‌ ಪತ್ನಿಯನ್ನು ಹೇಗಾದರೂ ಕೊಲೆ ಮಾಡಬೇಕು ಎಂದು ಹೇಳಿಕೊಂಡಿದ್ದ. ಪತ್ನಿ ಪುಷ್ಪಲತಾಳನ್ನು ಕೊಲೆ ಮಾಡುವುದಕ್ಕೆ ವಿನಯ್‌ಗೆ 1 ಲಕ್ಷ ರೂ. ಸುಪಾರಿ ಕೊಟ್ಟಿದ್ದ. ಕೊಲೆ ಮಾಡಲು ವಿನಯ್‌ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಇಬ್ಬರೂ ಸೇರಿಕೊಂಡು ಪುಷ್ಪಲತಾ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಫೆ.5ರಂದು ಬೆಳಗ್ಗೆಯೇ ಶಿವಶಂಕರ್‌ ಮನೆಯಿಂದ ಹೊರ ಹೋಗಿದ್ದ. ಕೃತ್ಯ ಎಸಗುವುದು ಗೊತ್ತಾಗದೇ ಇರಲಿ ಎಂಬ ಉದ್ದೇಶದಿಂದ ಮನೆಯಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದ. ಪೂರ್ವ ನಿಯೋಜನೆಯಂತೆ ಫೆ.5ರಂದು ಮಧ್ಯಾಹ್ನ ಶಿವಶಂಕರ್‌ ಮನೆಗೆ ವಿನಯ್‌ ಎಂಟ್ರಿ ಕೊಟ್ಟಿದ್ದ. ಇತ್ತ ವಿನಯ್‌ ಬಾಗಿಲು ಬಡಿಯುತ್ತಿದ್ದಂತೆ ಪುಷ್ಪಲತಾ ಬಾಗಿಲು ತೆರೆದಿದ್ದಾರೆ.

Advertisement

ಕೂಡಲೇ ಮನೆಗೊಳಗೆ ಎಂಟ್ರಿ ಕೊಟ್ಟ ವಿನಯ್‌ ಏಕಾಏಕಿ ಪುಷ್ಪಲತಾಳ ಕತ್ತು ಬಿಗಿದು ಹತ್ಯೆ ಮಾಡಿದ್ದ. ಬಳಿಕ ಪುಷ್ಪಲತಾ ಶವವನ್ನು ವೇಲಿನಿಂದ ಕಿಟಕಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿ ಅಲ್ಲಿಂದ ಪರಾರಿಯಾಗಿದ್ದ.

ಪತ್ನಿ ಕೊಲೆ ಮಾಡಿಸಿ ಪತಿಯ ಹೈಡ್ರಾಮ: ಪತ್ನಿ ಕೊಲೆಯಾಗಿರುವುದು ಖಚಿತವಾಗುತ್ತಿದ್ದಂತೆ ಮನೆಗೆ ವಾಪಸ್ಸಾದ ಶಿವಶಂಕರ್‌ ಮಹಾಲಕ್ಷ್ಮೀಲೇಔಟ್‌ ಪೊಲೀಸರಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪುಷ್ಪಲತಾ ಶವ ಪರಿಶೀಲಿಸಿದಾಗ ಇದು ಆತ್ಮಹತ್ಯೆ ಅಲ್ಲ ಎಂಬುದು ರುಜುವಾತಾಗಿತ್ತು. ಇತ್ತ ಪತಿ ಶಿವಶಂಕರ್‌ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಗೋಳಾಡಿ ಹೈಡ್ರಾಮಾ ಮಾಡಿದ್ದ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಶಿವಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗಲೂ ಆತ ಸತ್ಯ ಬಾಯ್ಬಿಟ್ಟಿರಲಿಲ್ಲ.

ಆರೋಪಿ ಸುಳಿವು ಕೊಟ್ಟ ಸಿಸಿ ಕ್ಯಾಮೆರಾ: ಶಿವಶಂಕರ್‌ ಮನೆಯನ್ನು ಪರಿಶೀಲನೆ ನಡೆಸಿದಾಗ ಬೆಡ್‌ ರೂಮ್‌ ಸೇರಿದಂತೆ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವುದು ಪತ್ತೆಯಾಗಿತ್ತು. ಶ್ರೀಕಂಠೇಶ್ವರ ನಗರದ ಶಿವಶಂಕರ್‌ ಮನೆಯ ಸುತ್ತ-ಮುತ್ತಲಿನ 200 ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದರು. ಆ ವೇಳೆ ಕೃತ್ಯ ನಡೆದ ಸಮಯದಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿತ್ತು. ಈ ಕುರಿತು ಶಿವಶಂಕರ್‌ ಬಳಿ ವಿಚಾರಿಸಿದಾಗ ಆತ ನನ್ನ ಸ್ನೇಹಿತ ವಿನಯ್‌ ಎಂಬುದನ್ನು ಒಪ್ಪಿಕೊಂಡಿದ್ದ. ಕೂಡಲೇ ಅಲರ್ಟ್‌ ಆದ ಪೊಲೀಸರು ವಿನಯ್‌ನನ್ನು ಹುಡುಕಾಡಿ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿವಶಂಕರ್‌ ಪತ್ನಿ ಹತ್ಯೆಗೆ 1 ಲಕ್ಷ ಸುಪಾರಿ ಕೊಟ್ಟ ಸಂಗತಿ ವಿವರಿಸಿದ್ದ. ನಂತರ ಶಿವಶಂಕರ್‌ ಸಹ ಪೊಲೀಸರಿಗೆ ತನ್ನ ಕೃತ್ಯ ವಿವರಿಸಿದ್ದ. ಕಳೆದ ಐದು ವರ್ಷಗಳ ಹಿಂದೆ ಬ್ಯಾಂಕ್‌ವೊಂದರಲ್ಲಿ ಶಿವಶಂಕರ್‌ಗೆ ವಿನಯ್‌ನ ಪರಿಚಯವಾಗಿತ್ತು. ನಂತರ ಇಬ್ಬರೂ ಸ್ನೇಹಿತರಾಗಿದ್ದರು. ಇತ್ತೀಚೆಗೆ ವಿನಯ್‌ ಕೆಲಸವಿಲ್ಲದೇ ಖಾಲಿ ಕುಳಿತಿದ್ದ ಎಂದು ತಿಳಿದು ಬಂದಿದೆ.

ಆರೋಪಿ ವಿಚಾರಣೆ ವೇಳೆ ಮತ್ತೂಂದು ಕೊಲೆ ಬೆಳಕಿಗೆ: ಆರೋಪಿ ವಿನಯ್‌ನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದಾಗ ಆತ 2023ರ ಜನವರಿಯಲ್ಲಿ ತುಮಕೂರಿನ ತುರುವೆಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾಯಸಂದ್ರ ಕೆರೆಗೆ ಪತ್ನಿ ದರ್ಶಿನಿಯನ್ನು ತಳ್ಳಿ ಕೊಲೆ ಮಾಡಿ ಜೈಲು ಪಾಲಾಗಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಜೂನ್‌ ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಹೊರಗೆ ಬಂದಿದ್ದ ಎಂಬುದು ಗೊತ್ತಾಗಿದೆ. ತನ್ನ ಪತ್ನಿ ಕೊಲೆ ಪ್ರಕರಣದಲ್ಲೂ ಮೊದಲಿಗೆ ಆತ್ಮಹತ್ಯೆ ಎಂದು ವಿನಯ್‌ ಬಿಂಬಿಸಿದ್ದ. ಆದರೆ, ಪೊಲೀಸರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ನೀರಿಗೆ ತಳ್ಳಿ ಕೊಲೆ ಮಾಡಿರುವ ಸುಳಿವು ಸಿಕ್ಕಿತ್ತು. ಇದೀಗ ತುಮಕೂರು ಪೊಲೀಸರಿಂದ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ವಿನಯ್‌ ಹಿಂದಿನ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ತರಿಸಿಕೊಳ್ಳಲು ಮುಂದಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next