Advertisement

ಗೋಡೆ ಕೊರೆದು 1.2 ಕೆಜಿ ಚಿನ್ನ ಕಳವು :ಆರೋಪಿಗಳ ಕೃತ್ಯ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆ

01:15 PM Feb 24, 2022 | Team Udayavani |

ಬೆಂಗಳೂರು: ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ದೋಚಿರುವ ಘಟನೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೆಣ್ಣೂರಿನ ಸರಾಯಿಪಾಳ್ಯ ದಲ್ಲಿರುವ ರಾಘವೇಂದ್ರ ಜ್ಯುವೆಲ್ಲರಿಯ ಗೋಡೆ ಕೊರೆದ ಆರೋಪಿಗಳು, 50 ಲಕ್ಷ ರೂ. ಮೌಲ್ಯದ 1,200 ಗ್ರಾಂ ಚಿನ್ನಾ ಭರಣ ದೋಚಿದ್ದಾರೆ. ಮಳಿಗೆಗೆ ಹೊಂದಿಕೊಡಂತೆ ಪಕ್ಕದ ಕಟ್ಟಡಕ್ಕೆ ಹೋಗಲು ಮೆಟ್ಟಿಲುಗಳಿದ್ದು, ಈ ಭಾಗದಲ್ಲಿ ಮಳಿಗೆಯ ಗೋಡೆಯನ್ನು ಕೊರೆದು, ಒಳ ನುಗ್ಗಿರುವ ಕಳ್ಳರು ಚಿನ್ನಾಭರಣ ದೋಚಿದ್ದಾರೆ. ಬುಧವಾರ ಬೆಳಗ್ಗೆ ಮಾಲೀಕರು ಮಳಿಗೆ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.

Advertisement

ಆರೋಪಿಗಳ ಕೃತ್ಯ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗಾಗಿ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮಳಿಗೆ ಬಾಗಿಲು ಮೀಟಿ ದರೋಡೆ

ಬೆಂಗಳೂರು: ನಸುಕಿನಲ್ಲಿ ಜ್ಯುವೆಲ್ಲರಿ ಮಳಿಗೆಯ ಬಾಗಿಲು ಮೀಟಿ ಒಳಗೆ ಮಲಗಿದ್ದ ಕೆಲಸಗಾರರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಚಿನ್ನದ ಹಾಗೂ ಬೆಳ್ಳಿ ವಸ್ತಗಳನ್ನು ದೋಚಿದ್ದ ಐವರು ದರೋಡೆಕೋರರು ಒಂದು ವರ್ಷದ ಬಳಿಕ ಸಿಟಿ ಮಾರುಕಟ್ಟೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮೊಹಮ್ಮದ್ ಫರ್ಹಾನ್ , ನದೀಮ್‌ ಪಾಷಾ, ನಯಾಜ್‌ ಪಾಷಾ, ಸಲ್ಮಾನ್‌ ಪಾಷಾ, ಇಮ್ರಾನ್‌ ಪಾಷಾ ಬಂಧಿತರು. ಆರೋಪಿಗಳಿಂದ 3.77 ಲಕ್ಷ ರೂ. ಮೌಲ್ಯದ 60 ಗ್ರಾಂ ತೂಕದ 2 ಚಿನ್ನದ ಸರಗಳು, ಒಂದು ಕೆ.ಜಿ. 80 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, 25 ಸಾವಿರ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

Advertisement

ಇದನ್ನೂ ಓದಿ : ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?

ಚಿಕ್ಕಪೇಟೆಯಲ್ಲಿರುವ ಆರ್‌.ಜೆ.ಜ್ಯುವೆಲ್ಲರಿ ಮಳಿಗೆಯಲ್ಲಿ ದೂರುದಾರ ಲಕ್ಷ್ಮಿಕಾಂತ್ ಘೋರೈ ಸೇರಿ ಮೂವರು ಕೆಲಸಗಾರರು ಇದ್ದು, ಕಳೆದ ವರ್ಷ ಲಾಕ್‌ಡೌನ್‌ ಇದ್ದರಿಂದ ಅಲ್ಲಿಯೇ ಕೆಲಸ ಮಾಡಿ ಮಲಗುತ್ತಿದ್ದರು. ಮೇ 12ರ  ನಸುಕಿನ 3.30ರ ಸುಮಾರಿಗೆ ಐದು ಮಂದಿ ದರೋಡೆಕೋರರು ಮಳಿಗೆಯ ಬಾಗಿಲು ಮೀಟಿ ಒಳಗಡೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಕೆಲಸಗಾರರಿಗೆ ಎಚ್ಚರವಾಗಿದೆ. ಆಗ ದರೋಡೆಕೋರರು ಏಕಾಏಕಿ ಮಾರಕಾಸ್ತ್ರಗಳನ್ನು ತೋರಿಸಿ ಮೂವರ ಮೇಲೆ ಹಲ್ಲೆ ನಡಸಿದ್ದು, ಲಕ್ಷ್ಮಿಕಾಂತ್ ಘೋರೈ ಕತ್ತಿನಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಸರ, ಅಂಗಡಿಯಲ್ಲಿ ಒಂದು ಕೆ.ಜಿ.ಬೆಳ್ಳಿ ವಸ್ತುಗಳನ್ನು ಹಾಗೂ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಕಾರ್ಯಾಚರಣೆ ನಡೆಸಿ ಒಂದು ವರ್ಷಗಳ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next