ಬೆಂಗಳೂರು: ಇತ್ತೀಚೆಗೆ ಪಿಳ್ಳಣ್ಣಗಾರ್ಡನ್ ಸಮೀಪದ ರೈಲು ಹಳಿ ಸಮೀಪದಲ್ಲಿ ಸತೀಶ್(15) ಎಂಬಾತನ ಹತ್ಯೆಗೈದಿದ್ದ ಮೂವರು ಆರೋಪಿಗಳನ್ನು ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ಮುಸ್ಲಿಂ ಕಾಲೋನಿ ನಿವಾಸಿ ಸುಹೇಲ್ ಉಲ್ಲಾ ಷರೀಫ್(19), ಪಿಳ್ಳಣ್ಣ ಗಾರ್ಡನ್ ನಿವಾಸಿ ಸೈಯದ್ ಶೋಯಿಬ್(20) ಮತ್ತು ಮೊಹಮ್ಮದ್ ಹುಸೇನ್ (18) ಬಂಧಿತರು. ಆರೋಪಿಗಳು ಏ.2ರಂದು ಸತೀಶ್ ಎಂಬಾತನನ್ನು ದೊಣ್ಣೆಗಳಿಂದ ಹೊಡೆದು ಕೊಲೆಗೈದು, ರೈಲು ಹಳಿ ಸಮೀಪದಲ್ಲಿ ಮೃತ ದೇಹ ಎಸೆದು ಹೋಗಿದ್ದರು. ಆರೋಪಿಗಳ ವಿಚಾರಣೆಯಲ್ಲಿ ಕುದುರೆ ಸವಾರಿಗೆ ಅವಕಾಶ ನೀಡದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದರು.
ಪಿಳ್ಳಣ್ಣ ಗಾರ್ಡನ್ ಬಳಿ ಕುದುರೆ ಸಾಕಿಕೊಂಡಿದ್ದ ಸತೀಶ್, ಕುದುರೆ ಮೇಲೆ ಜನರನ್ನು ಕೂರಿಸಿಕೊಂಡು ಒಂದು ರೌಂಡ್ ಹಾಕಿ ಹಣ ಪಡೆಯುತ್ತಿದ್ದ. ಅದರಿಂದಲೇ ಕುಟುಂಬ ನಿರ್ವಹಿಸುತ್ತಿದ್ದ. ಎರಡು ವಾರಗಳ ಹಿಂದೆ ರಿಚರ್ಡ್ ಪಾರ್ಕ್ ಬಳಿ ಬಂದ ಸುಹೇಲ್ ಉಲ್ಲಾ ಷರೀಫ್, ಕುದುರೆ ಮೇಲೆ ಹತ್ತಿ ಫೋಟೋ ತೆಗೆದುಕೊಳ್ಳಬೇಕು. ಕುದುರೆ ಕೊಡುವಂತೆ ಕೇಳಿದ್ದಾನೆ. ಆಗ ಸತೀಶ್ ನಿರಾಕರಿಸಿದ್ದ. ಅದರಿಂದ ಆಕ್ರೋಶಗೊಂಡ ಆರೋಪಿ, ಕಪಾಳಮೋಕ್ಷ ಮಾಡಿದ್ದ. ಅದೇ ದ್ವೇಷದಿಂದ 8 ದಿನಗಳ ಹಿಂದೆ ಲಿಂಗರಾಜುಪುರ ಬಳಿ ಬಂದಿದ್ದ ಸತೀಶ್ ಮತ್ತು ಸುಹೇಲ್ ಉಲ್ಲಾ ಷರೀಫ್ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ತನ್ನ ಇತರೆ ಸಹಚರರ ಜತೆ ಸೇರಿಕೊಂಡು ಬಿಲಾಲ್ ಮಸೀದಿ ಬಳಿ ಸತೀಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಪಿಳ್ಳಣ್ಣಗಾರ್ಡನ್ ರೈಲು ಹಳಿ ಬಳಿ ಕರೆದೊಯ್ದು ದೊಣ್ಣೆಗಳಿಂದ ಹೊಡೆದು ಕೊಲೆಗೈದು, ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಅವರು ಹೇಳಿದರು.
ಆರೋಪಿಗಳ ಪತ್ತೆಗಾಗಿ ಸುಮಾರು 60-70 ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ಘಟನೆಗೂ ಮೊದಲ ಒಂದು ವಾರದ ಹಿಂದಿನ ಸತೀಶ್‌ನ ದಿನಚರಿ ಮಾಹಿತಿ ಸಂಗ್ರಹಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಪ್ರಮುಖವಾಗಿ ಆರೋಪಿಗಳು ಸತೀಶ್ ಜತೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಪತ್ತೆಯಾಗಿತ್ತು. ಈ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯಿಬಿಟ್ಟಿದ್ದಾರೆ ಎಂದು ಡಿಸಿಪಿ ಭೀಮಾಶಂಕರ್ ಗುಳೇದ್ ಹೇಳಿದರು.
ಕಾಡುಗೊಂಡನಹಳ್ಳಿ ಠಾಣಾಧಿಕಾರಿ ರೋಹಿತ್ ನೇತೃತ್ವದ ಪಿಎಸ್‌ಐ ಅಮರೇಶ್, ದುಂಡಪ್ಪ ನೇಗಿನಾಳ್ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ.