ಬೆಂಗಳೂರು: ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುವ ಸೋಗಿನಲ್ಲಿ ಐಟಿ-ಬಿಟಿ ಕಂಪನಿ ಉದ್ಯೋಗಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಕೇರಳ ಮೂಲದ ಐವರು ವಿದ್ಯಾರ್ಥಿಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮೊಹದ್ ಸಕಾರಿಯ, ಶಾಮಿಲ್, ಪ್ರಣವ್, ಸನುಭವ್ ರವೀಂದ್ರನ್, ಶ್ಯಾಮ್‌ದಾಸ್ ಬಂಧಿತರು. ಆರೋಪಿಗಳೆಲ್ಲರೂ 25 ವಯೋಮಾನದವರಾಗಿದ್ದಾರೆ. ಅವರಿಂದ 10 ಲಕ್ಷ ರೂ. ಮೌಲ್ಯದ 2.345 ಕೆ.ಜಿ. ಗಾಂಜಾ, 27 ಗ್ರಾಂ ಎಂಡಿಎಂಎ ಕ್ರಿಸ್ಟಲ್, 20 ಎಲ್‌ಎಸ್‌ಡಿ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.
ಕೇರಳದಿಂದ ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿರುವ ಆರೋಪಿಗಳು, ನಗರದ ಕಾಲೇಜುಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕಾಲೇಜಿಗೆ ಸರಿಯಾಗಿ ಹೋಗದೆ,ನೈಜಿರಿಯಾ, ಕೇರಳ ಮೂಲದ ವ್ಯಕ್ತಿಗಳಿಂದ ಡ್ರಗ್ಸ್‌ಗಳನ್ನು ಖರೀದಿಸಿ ಅವುಗಳನ್ನು ಆಯ್ದ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು.
ಉತ್ತರ ಭಾರತೀಯ ಆಹಾರ ಪದಾರ್ಥಗಳ ಪ್ಯಾಕೆಟ್‌ಗಳಲ್ಲಿ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ತುಂಬಿ, ನೇರವಾಗಿ ಗ್ರಾಹಕರ ಮನೆಗಳಿಗೆ ತಲುಪಿಸುತ್ತಿದ್ದರು. ಐಟಿ-ಬಿಟಿ ಕಂಪನಿ ಉದ್ಯೋಗಿಗಳು, ಶ್ರೀಮಂತರ ಮಕ್ಕಳು, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇದನ್ನೂ ಓದಿ : ಶಾಲೆಗೆ ಗೈರಾದ ವಿದ್ಯಾರ್ಥಿಯನ್ನು ಕರೆಯಲು ಹೋದ ಮುಖ್ಯ ಶಿಕ್ಷಕನ ಮೇಲೆ ಹಲ್ಲೆ: ದೂರು ದಾಖಲು