ಕುಂದಾಪುರ: ತನಗೆ ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ರವಿವಾರ ಕುಂದಾಪುರ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದು ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣವಾಗಿದೆ.
ಮೂಡುಗೋಪಾಡಿಯ ನಿವಾಸಿ ಅಲ್ಫಿಯಾ ಅಖ್ತರ್ (29) ಅವರು ಪತಿ ಹಾಗೂ ಅವರ ಹೆತ್ತವರ ವಿರುಧ್ಧ ದೂರು ನೀಡಿದ್ದಾರೆ.
ಹಿರಿಯಡಕ ನಿವಾಸಿಗಳಾದ ಹನೀಫ್ ಸಯ್ಯದ್ (32), ಆತನ ತಂದೆ ಅಬ್ಟಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಅಕ್ಕನ ಆಯೇಷಾ ವಿರುದ್ಧ ದೂರು ದಾಖಲಾಗಿದೆ.
ಪ್ರಕರಣದ ವಿವರ
ಹನೀಫ್ ಜತೆ ತನಗೆ ಈ ವರ್ಷದ ಜು. 4ಕ್ಕೆ ಮೂಡುಗೋಪಾಡಿಯಲ್ಲಿ ಮದುವೆಯಾಗಿದೆ. ಆಗ ಪತಿ ಮನೆಯವರು 5 ಲ. ರೂ. ವರದಕ್ಷಿಣೆ ಕೇಳಿದ್ದು, ತಾನು 2 ಲ. ರೂ. ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿರುವುದಾಗಿ ಅಲ್ಫಿಯಾ ದೂರಿನಲ್ಲಿ ತಿಳಿಸಿದ್ದಾರೆ.
ಕುಂದಾಪುರ ನಗರ ಠಾಣೆಯಲ್ಲಿ ಇತ್ತೀಚೆಗಷ್ಟೇ ಜಾರಿಯಾದ ಸೆಕ್ಷನ್ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯಿದೆ ಹಕ್ಕಿನಡಿ ಕೇಸು ದಾಖಲಾಗಿದೆ. ಜತೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯೆಯನ್ನೂ ಹೇರಲಾಗಿದೆ.