Advertisement

ಕರಾವಳಿ ಭಾಗದ ಅಪರಾಧ ಸುದ್ಧಿಗಳು

02:04 AM Jul 11, 2019 | Team Udayavani |
ದಾರಿ ಕೇಳಿ ಮೊಬೈಲ್, ಸರ ಕದ್ದರು!
ಗಂಗೊಳ್ಳಿ: ಬಗ್ವಾಡಿಯ ಹಾಲು ಡೈರಿಯ ಕೆಲಸಕ್ಕೆಂದು ನೂಜಾಡಿ ಗ್ರಾಮದ ಹೊಟ್ಲಬೈಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಲ್ಪನಾ (19) ಅವರ ಮೊಬೈಲ್ ಹಾಗೂ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಕಸಿದು ಪರಾರಿಯಾದ ಘಟನೆ ಜು. 10ರಂದು ಬೆಳಗ್ಗೆ 9.45ರ ಸುಮಾರಿಗೆ ನಡೆದಿದೆ.

ಕಲ್ಪನಾರಲ್ಲಿ ವಂಡ್ಸೆಗೆ ಹೋಗುವ ದಾರಿ ಯಾವುದೆಂದು ಕೇಳಿ ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. ಕಳವಾದ ಚಿನ್ನದ ಸರ 8 ಗ್ರಾಂ ತೂಕದ್ದಾಗಿದ್ದು, ಅಂದಾಜು 30 ಸಾ. ರೂ. ಮೌಲ್ಯದ್ದಾಗಿದೆ. ಮೊಬೈಲ್ 13 ಸಾ. ರೂ. ಬೆಲೆಯದ್ದಾಗಿದೆ ಎಂದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ರೇಲ್‌ ನಿಂದ ಮಂಗಳೂರಿಗೆ ಬರುತ್ತಿದ್ದ ವ್ಯಕ್ತಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ಸಾವು
ಮಂಗಳೂರು: ಇಸ್ರೇಲ್ನಲ್ಲಿದ್ದ ಮಂಗಳೂರು ಪಡೀಲ್ ವಿಲಿಯಂ ಫೆರ್ನಾಂಡಿಸ್‌ (49) ಅವರುರು ಚಿಕಿತ್ಸೆಗಾಗಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಂಬಯಿ ವಿಮಾನ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
Advertisement

ಇಸ್ರೇಲ್ನ ಟೆಲ್ ಅವಿವ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಬೆನ್ನೆಲುಬಿನ ಗಾಯದ ಚಿಕಿತ್ಸೆಗಾಗಿ ಮಂಗಳೂರಿಗೆ ಹೊರಟು ಜು. 9ರಂದು ಬೆಳಗ್ಗೆ ಮುಂಬಯಿ ವಿಮಾನಕ್ಕೆ ತಲುಪಿದ್ದು, ಅಲ್ಲಿಂದ ಮಂಗಳೂರು ವಿಮಾನ ಹತ್ತಲು ಸಿದ್ಧತೆ ನಡೆಸುತ್ತಿದ್ದಾಗ ಘಟನೆ ಸಂಭವಿಸಿದೆ. ಮುಂಬಯಿಯಿಂದ ಮಂಗಳೂರಿಗೆ ಬರುವ ಪ್ರಯಾಣಿಕರ ಒತ್ತಡದಿಂದ ಇವರಿಗೆ ಸಕಾಲದಲ್ಲಿ ವಿಮಾನದ ಟಿಕೆಟ್ ಸಿಕ್ಕಿರಲಿಲ್ಲ ಎಂದು ಹೇಳಲಾಗುತ್ತಿದೆ.

ಕೀಟನಾಶಕ ಕುಡಿದು ಮಹಿಳೆ ಸಾವು
ಸಿದ್ದಾಪುರ: ಹೊಸಂಗಡಿ ಗ್ರಾಮದ ಗೆರ್ಸಿಕಲ್ಲು ಮಾಲತಿ (45) ಅವರು ಮದ್ಯ ಎಂದು ಭಾವಿಸಿ ಗದ್ದೆಗೆ ಬಳಸುವ ಕೀಟನಾಶಕವನ್ನು ಕುಡಿದು ಮೃತಪಟ್ಟಿದ್ದಾರೆ. ಅವರನ್ನು ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಜು.10ರಂದು ಮೃತಪಟ್ಟರು. ಮಗ ಉದಯ ನಾಯ್ಕ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಾವರ: ವಿವಾಹಿತ ನಾಪತ್ತೆ
ಕಾಪು: ಮಲ್ಪೆಯಲ್ಲಿ ಮೀನುಗಾರಿಕಾ ಉದ್ಯಮದಲ್ಲಿ ಪಾಲುದಾರರಾಗಿದ್ದ ಉದ್ಯಾವರ ಸೌಂದರ್ಯ ಕಾಂಪ್ಲೆಕ್ಸ್‌ ನಿವಾಸಿ ತೀರ್ಥರಾಜ್‌ ಸಾಲ್ಯಾನ್‌ (59) ಅವರು ಜು. 9ರಿಂದ ನಾಪತ್ತೆಯಾಗಿದ್ದಾರೆ. ಅವರು ಜು. 9ರಂದು ಮಧ್ಯಾಹ್ನ ಉಡುಪಿಗೆ ಹೋಗಿದ್ದು, ಪತ್ನಿ ಮತ್ತು ಮಗನಿಗೆ ದೂರವಾಣಿ ಕರೆಮಾಡಿ ತಡವಾಗಿ ಬರುವುದಾಗಿ ತಿಳಿಸಿದ್ದರು.ಬುಧವಾರ ಸಂಜೆಯಾದರೂ ಮರಳದ ಕಾರಣ ಪತ್ನಿ ಸುನಂದಾ ಕಾಪು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ನಾಪತ್ತೆ
ಮೂಲ್ಕಿ: ಕಾರ್ನಾಡು ಸದಾಶಿವ ನಗರದ ತನ್ನ ಮನೆಯಿಂದ ಜು. 2ರಂದು ಹೊರಗೆ ಹೋದ ನೈಮಾ (23) ನಾಪತ್ತೆಯಾಗಿದ್ದಾರೆ ಎಂದು ಮೂಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸುಮಾರು 5.6 ಅಡಿ ಎತ್ತರ, ಬಿಳಿ ಮೈಬಣ್ಣ, ದುಂಡು ಮುಖದ ಈಕೆ ತುಳು, ಕನ್ನಡ, ಬ್ಯಾರಿ ಭಾಷೆ ಮಾತನಾಡುತ್ತಾರೆ. ಮಾಹಿತಿ ಸಿಕ್ಕವರು ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಬಹುದು.
ಅನಾರೋಗ್ಯ: ಮಧ್ಯವಯಸ್ಕ ಆತ್ಮಹತ್ಯೆ
ಕುಂದಾಪುರ ಉಪ್ಪಿನಕುದ್ರು ಗ್ರಾಮದ ಪಡುಕೇರಿ ನಿವಾಸಿ ನಾಗಪ್ಪಯ್ಯ (53) ಅವರು ಜು. 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಗವಿಕಲರಾಗಿದ್ದ ಅವರು ಅನಾರೋಗ್ಯದಿಂದಲೂ ಬಳಲುತ್ತಿದ್ದರು.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಗೆ ಅಶ್ಲೀಲ ವೀಡಿಯೋ ತೋರಿಸಿದ ಆರೋಪ: ಯುವಕನ ಸೆರೆ

ಮಂಗಳೂರು: ನಗರದ ಯೆಯ್ನಾಡಿಯ ಶರ್ಬತ್‌ಕಟ್ಟೆ ಬಳಿ ಬುಧವಾರ ಸಂಜೆ ಯುವತಿಗೆ ಅಶ್ಲೀಲ ವೀಡಿಯೋ ತೋರಿಸಿದ ಯುವಕ ನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂದೂರ್‌ವೆಲ್ ನಿವಾಸಿ ಡೆವಿನ್‌ ಪಿಂಟೋ (29) ಬಂಧಿತ ಆರೋಪಿ. ಈತ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ ತೋರಿಸಿದ್ದ ಎಂದು ಆರೋಪಿಸಲಾಗಿದೆ.

Advertisement

ಯುವತಿ ಬೊಬ್ಬೆ ಹಾಕಿದಾಗ ಸ್ಥಳೀಯರು ಯುವಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲ್ಕಿ: ಜುಗಾರಿನಿರತ 7 ಮಂದಿ ಬಂಧನ
ಮೂಲ್ಕಿ: ಉಳೆಪಾಡಿ ಮುಂಡಿಕಾಡಿನಲ್ಲಿ ಉಲಾಯಿ- ಪಿದಾಯಿ ಜೂಜು ನಿರತರಾಗಿದ್ದ ಏಳು ಮಂದಿಯನ್ನು ನಗದು ಸಹಿತ ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

ಲ್ಯಾನ್ಸಿ ಪಿಂಟೋ, ಕಿಶೋರ್‌ ಕುಮಾರ್‌, ವಿಠಲ, ಯೋಗೀಶ್‌, ಭಾಸ್ಕರ, ಸುಂದರ ಮತ್ತು ಮಹಮ್ಮದ್‌ ಶಾಯಿದ್‌ ಬಂಧಿತರು.

ಖಚಿತ ಮಾಹಿತಿ ಪಡೆದ ಮೂಲ್ಕಿ ಎ.ಎಸ್‌.ಐ. ಚಂದ್ರಶೇಖರ್‌ ಅವರು ತಮ್ಮ ತಂಡದ ಜತೆಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಹೋಗಿ ಆರೋಪಿಗಳನ್ನು ಬಂಧಿಸಿ, ಅವರಿಂದ 7,500 ರೂ. ಅನ್ನು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಸೇವನೆ: ಮೂವರ ಬಂಧನ
ಉಡುಪಿ: ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಸೆನ್‌ ಅಪರಾಧ ಠಾಣೆಯ ಪೊಲೀಸರು ವಿವಿಧೆಡೆಗಳಿಂದ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜು. 8ರಂದು ಮಣಿಪಾಲದಲ್ಲಿ ಕೋಟೇಶ್ವರದ ಸುಮಂತ್‌ ಮಯ್ಯ (23) ಮತ್ತು ಇಂದ್ರಾಳಿ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಗಂಗೊಳ್ಳಿಯ ಸಂದೀಪ ಖಾರ್ವಿ(26) ಹಾಗೂ ಜು.9ರಂದು ಮಣಿಪಾಲ ವಿ.ಪಿ.ನಗರದಲ್ಲಿ ಮಹಮ್ಮದ್‌ ಹಮ್ದನ್‌ ಎಂಬ ವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಗಾಂಜಾ ಸೇವನೆ: 7 ಮಂದಿ ಬಂಧನ
ಗೋಣಿಕೊಪ್ಪಲು
: ಗಾಂಜಾ ಸೇವಿಸುತ್ತಿದ್ದ ಏಳು ಮಂದಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ.

ಪೊನ್ನಂಪೇಟೆ ಠಾಣಾಧಿಕಾರಿ ಬಿ.ಜಿ. ಮಹೇಶ್‌ ನೇತೃತ್ವದಲ್ಲಿ ದಾಳಿ ನಡೆಸಿ ಪೊನ್ನಂಪೇಟೆ ಜೂನಿಯರ್‌ ಕಾಲೇಜು ಜಂಕ್ಷನ್‌ ಬಳಿಯಿಂದ ನಿಸರ್ಗ ನಗರದ ಸಿ.ಜೆ. ರತನ್‌, ಐ.ಎಸ್‌. ಮನು, ಹಳ್ಳಿಗಟ್ಟು ಗ್ರಾಮದ ಬಿ. ನಿಂಗರಾಜು, ಜನತಾ ಕಾಲನಿ ನಿವಾಸಿ ಪಿ.ಎ. ಮುಬಾರ್‌ ಮತ್ತು ಪೊನ್ನಂಪೇಟೆ ಆಶ್ರಮ ಶಾಲೆಯ ಬಸ್ಸು ತಂಗುದಾಣದ ಬಳಿಯಿಂದ ಕಾಟ್ರಕೊಲ್ಲಿ ಪೈಸಾರಿ ನಿವಾಸಿ ವಿ. ಎಚ್. ಫೈಸಲ್, ನಿಸರ್ಗ ನಗರದ ಟಿ.ಜಿ. ಕಾರ್ಯಪ್ಪ, ಬಿ. ವಿ. ವರುಣ್‌ ಅವರನ್ನು ಬಂಧಿಸಲಾಗಿದೆ.

ಕಾರು ಪಲ್ಟಿ
ಗಂಗೊಳ್ಳಿ: ಮುಳ್ಳಿಕಟ್ಟೆ ರಾ.ಹೆದ್ದಾರಿ 66ರಲ್ಲಿ ದನ ಅಡ್ಡ ಬಂದಾಗ ಒಮ್ಮೆಲೇ ಬ್ರೇಕ್‌ ಹಾಕಿದ ಕಾರು ಪಲ್ಟಿಯಾದ ಘಟನೆ ಜು. 10 ರಂದು ಸಂಭವಿಸಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಅಪಘಾತ: ಇಬ್ಬರ ಸಾವು
ಕಾಸರಗೋಡು
: ಮಾಣಿಕೋತ್‌ ಮತ್ತು ಮೊಗ್ರಾಲ್ಪುತ್ತೂರಿನಲ್ಲಿ ಸಂಭವಿಸಿದ ಅಪಘಾತ ದಲ್ಲಿ ಇಬ್ಬರು ಸಾವಿಗೀಡಾಗಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಾಣಿಕೋತ್‌ ಕೆಎಸ್‌ಟಿಪಿ ರಸ್ತೆಯಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ವೆಳ್ಳಿಕೋತ್‌ ಅಡೋಟ್ ಕುಂಞಿಪ್ಪುರಯಿಲ್ ಕುಂಞಿಕಣ್ಣನ್‌ ಅವರ ಪುತ್ರ ಕೆ.ಪಿ. ಅಭಿಲಾಷ್‌ (28) ಸಾವಿಗೀಡಾದರು.

ಮೊಗ್ರಾಲ್ಪುತ್ತೂರಿನಲ್ಲಿ ಕಾರು ಢಿಕ್ಕಿ ಹೊಡೆದು ಬೈಕ್‌ ಸಹಸವಾರ, ಕುಂಬಳೆ ಅಕಾಡೆಮಿಯ ಪ್ಲಸ್‌ ಟು ವಿದ್ಯಾರ್ಥಿ ನೂಅಮಾನ್‌ (17) ಸಾವಿಗೀಡಾಗಿ, ಸವಾರ ಮೊಗ್ರಾಲಿನ ಮುನಾಸಿರ್‌ (27) ಗಂಭೀರ ಗಾಯಗೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next