Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

02:49 AM Jul 04, 2019 | Sriram |

ತೊಕ್ಕೊಟ್ಟು: ವ್ಯಕ್ತಿಯ ಕೊಲೆ
ಉಳ್ಳಾಲ: ಸೋದರ ಮಾವನ ಮಗನನ್ನು ಕೊಲೆ ಮಾಡಿದ ಘಟನೆ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಚೆಂಬುಗುಡ್ಡೆಯ ಮಹಾಕಾಳಿ ದೈವಸ್ಥಾನದ ಮುಂಭಾಗದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಕೃತ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಸಂಶಯಿಸಲಾಗಿದೆ.

Advertisement

ಲಲಿತಾ ಎಂಬವರ ಅಣ್ಣನ ಮಗ ನಾರಾಯಣ (45) ಕೊಲೆಯಾದವರು. ಲಲಿತಾರ ಪುತ್ರ ರಾಜೇಶ್‌ (35) ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲಲಿತಾರ ಮನೆಯಲ್ಲೇ ಕೊಲೆ ನಡೆದಿದೆ. ಲಲಿತಾರಿಗೆ ಓರ್ವ ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ.

ಆರೋಪಿ ರಾಜೇಶ್‌ ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದ. ಆತ ತುಂಬಾ ಕುಡುಕನಾಗಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ನಾರಾಯಣ ಕೂಲಿ ಕೆಲಸ ಮಾಡುತ್ತಿದ್ದ.

ಪೊಲೀಸರಿಗೆ ತಿಳಿಸೋದು ಬೇಡ ಎಂದ ಆರೋಪಿ
ಘಟನೆ ನಡೆಯುವ ಹೊತ್ತಿಗೆ ಲಲಿತಾ ಅವರು ಸಮೀಪದ ಮನೆಯವರಲ್ಲಿ ಮಾತನಾಡುತ್ತಿದ್ದರು. ಅಲ್ಲಿಗೆ ತೆರಳಿದ ರಾಜೇಶ್‌, ನಾರಾಯಣನೇ ಕಡಿದುಕೊಂಡು ಬಿದ್ದಿದ್ದಾನೆ ಎಂದು ತಿಳಿಸಿದ್ದ. ಆಗ ಸ್ಥಳೀಯರು ಪೊಲೀಸರಿಗೆ ತಿಳಿಸೋಣ ಎಂದಾಗ, ಆರೋಪಿ ತಡೆದಿದ್ದ ಹಾಗೂ ನಾವೇ ಆಸ್ಪತ್ರೆಗೆ ಸಾಗಿಸೋಣ ಎಂದು ಹೇಳಿದ್ದ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಕೊಲೆಗೆ ಬಳಸಿದ್ದ ಕತ್ತಿಯನ್ನು ಆರೋಪಿಯು ನಾರಾಯಣನ ಕೈಯಲ್ಲಿ ಇರಿಸಿದ್ದ.

Advertisement

ದೇರಳಕಟ್ಟೆಯ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಫಾರೆನ್ಸಿಕ್‌ ತಜ್ಞ ಡಾ. ಮಹಾಬಲೇಶ್‌ ಶೆಟ್ಟಿ ಹಾಗೂ ತಂಡ , ಎಸಿಪಿ ರಾಮರಾವ್‌, ಉಳ್ಳಾಲ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ ಹಾಗೂ ಎಸ್‌ಐ ಗುರುವಪ್ಪ ಕಾಂತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ದೂರು
ಪುಂಜಾಲಕಟ್ಟೆ: ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆಯ ಸಂದೇಶವನ್ನು ಹರಿಯಬಿಡಲಾಗಿದೆ ಎಂದು ಆರೋಪಿಸಿ ಬಡಗಕಜೆಕಾರು ನಿವಾಸಿ ಪೀಸ್‌ ಫಯ್ನಾ ಅವರು ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಹೆಸರಿನ ಫೇಸ್‌ಬುಕ್‌ ಪೇಜ್‌ನ ಫೋಟೋ ಬಳಸಿ “ದಕ್ಷಿಣ ಕನ್ನಡದಲ್ಲೊಬ್ಬ ಜಿಹಾದಿ ಕಾಮುಕ’ ಎಂಬ ತಲೆಬರಹದ ಅಡಿಯಲ್ಲಿ ಯಾರೋ ಕಿಡಿಗೇಡಿಗಳು ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಅಲ್ಲದೆ, ಮಡಂತ್ಯಾರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಪೀಸ್‌ ಫಯ್ನಾ ಎಂಬ ಜಿಹಾದಿ ಯುವಕ ಸುಂದರ ಹಿಂದೂ ಯುವತಿಯರ ಗೆಳೆತನ ಮಾಡಿಕೊಂಡು ಉಚಿತವಾಗಿ ಬಟ್ಟೆಗಳನ್ನು ಕೊಡುತ್ತಿದ್ದಾನೆ. ಬಳಿಕ ಯುವತಿಯರನ್ನು ಪುಸಲಾಯಿಸಿ ತನ್ನ ಜಿಹಾದ್‌ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಿದ್ದಾನೆ. ಈ ಕಾಮುಕನಿಗೆ ತಕ್ಕ ಪಾಠ ಕಲಿಸಬೇಕು ಎನ್ನುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುತ್ತಾರೆ ಎಂದು ಪೊಲೀಸ್‌ ದೂರಿನಲ್ಲಿ ತಿಳಿಸಲಾಗಿದೆ.ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಲಶೇಖರದಲ್ಲಿ ಸರಣಿ ವಾಹನ ಅಪಘಾತ: ಇಬ್ಬರಿಗೆ ಗಾಯ
ಮಂಗಳೂರು: ನಗರದ ಕುಲಶೇಖರದ ಸಿಲ್ವರ್‌ ಗೇಟ್‌ ಬಳಿ ಬುಧವಾರ ಬೆಳಗ್ಗೆ ಸರಣಿ ವಾಹನ ಅಪಘಾತ ಸಂಭವಿಸಿದ್ದು, ಇದರಲ್ಲಿ ಪಿಕಪ್‌ ವಾಹನದ ಚಾಲಕ ಮಂಗಳೂರಿನ ಪ್ರವೀಣ್‌ ರೆಡ್ಡಿ (25) ಮತ್ತು ಕ್ಲೀನರ್‌ ಪುತ್ತೂರಿನ ವಿಜಯ್‌ (24) ಅವರು ಗಾಯಗೊಂಡಿದ್ದಾರೆ.

ಬೆಳಗ್ಗೆ 9.30ರ ವೇಳೆಗೆ ಕೋಳಿ ಸಾಗಾಟದ ಪಿಕಪ್‌ ವಾಹನ ಎಡಪದವಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕುಲಶೇಖರ ಸಿಲ್ವರ್‌ ಗೇಟ್‌ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಬಸ್ಸು ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಪಿಕಪ್‌ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮನೆಯ ಗೋಡೆಗೆ ಢಿಕ್ಕಿ ಹೊಡೆದು, ವಾಪಸ್‌ ರಸ್ತೆಯ ಬಲಬದಿಗೆ ಚಲಿಸಿ ಅಲ್ಲಿ ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಟ್ರಾಫಿಕ್‌ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಕೇಸು ದಾಖಲಾಗಿದೆ.

ಬಗಂಬಿಲ ಪ್ರಕರಣ: ಆರೋಪಿ ಇಂದು ಬಂಧನ?
ಉಳ್ಳಾಲ: ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಚೂರಿ ಇರಿತದಿಂದ ಗಂಭೀರ ಸ್ಥಿತಿಯಲ್ಲಿದ್ದ ಬಗಂಬಿಲ ನಿವಾಸಿ ದೀಕ್ಷಾ ಆರೋಗ್ಯದಲ್ಲಿ ಬುಧವಾರ ಚೇತರಿಕೆ ಕಂಡು ಬಂದಿದ್ದು, ಚಿಕಿತ್ಸೆಗೆ ಸೂಕ್ತವಾಗಿ ಸಂದಿಸುತ್ತಿದ್ದಾಳೆ. ಪ್ರಕರಣದ ಆರೋಪಿ ಸುಶಾಂತ್‌ ಗುಣಮುಖನಾಗಿದ್ದು, ಗುರುವಾರ ಆಸ್ಪತ್ರೆಯಿಂದ ಡಿಸ್‌ಚಾರ್ಚ್‌ ಆಗಲಿದ್ದು, ಬಳಿಕ ಪೊಲೀಸರು ಬಂಧಿಸುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.

ಮನೆಯಿಂದ 13.250 ರೂ. ಮೌಲ್ಯದ ಸೊತ್ತು ಕಳವು
ಮಂಗಳೂರು: ನಗರದ ಬೋಳಾರ ಮುಳಿಹಿತ್ಲಿನ ಅಪಾರ್ಟ್‌ ಮೆಂಟ್‌ ಒಂದರ ನಿವಾಸಿ ಧರ್ಮಗೌಡ ಅವರ ಮನೆಯಿಂದ ಬುಧವಾರ ಬೆಳಗ್ಗೆ 13,250 ರೂ. ಮೌಲ್ಯದ ಸೊತ್ತು ಕಳವಾಗಿವೆ.

ಧರ್ಮ ಗೌಡ ಬೆಳಗ್ಗೆ 6.10ಕ್ಕೆ ಮನೆಗೆ ಚಿಲಕ ಹಾಕಿ ಹೊರಗೆ ಹೋಗಿದ್ದು, 7 ಗಂಟೆಗೆ ಹಿಂದಿರುಗಿ ಬರುವಷ್ಟರಲ್ಲಿ ಕಳ್ಳತನ ನಡೆದಿದೆ.

ಕಳ್ಳರು ಮನೆಯ ಕೊಠಡಿಯ ಬಾಗಿಲಿನ ಚಿಲಕ ತೆಗೆದು ಒಳ ಪ್ರವೇಶಿಸಿ ಹ್ಯಾಂಗರ್‌ನಲ್ಲಿ ನೇತು ಹಾಕಿದ್ದ ಅಂಗಿಯ ಕಿಸೆಯಲ್ಲಿದ್ದ 7,250 ರೂ., ಬೆಡ್‌ ಮೇಲೆ ಇರಿಸಿದ್ದ 6,000 ರೂ. ಮೌಲ್ಯದ ಮೊಬೈಲ್‌ ಫೋನ್‌ ಹಾಗೂ ಬ್ಯಾಗಿನಲ್ಲಿದ್ದ ದಾಖಲೆಗಳನ್ನು ಕದ್ದಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿ ಅಮಾನತು
ಮಂಗಳೂರು: ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿಯಾಗಿದ್ದ ಡಾ| ಪ್ರವೀಣ್‌ಕುಮಾರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಯೂ ಆಗಿದ್ದ ಡಾ| ಪ್ರವೀಣ್‌ಕುಮಾರ್‌ ಅವರ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರು ಕಳೆದ ವಾರ ಪ್ರವೀಣ್‌ ಅವರನ್ನು ಹುದ್ದೆ ಯಿಂದ ಬಿಡುಗಡೆಗೊಳಿಸಿದ್ದರು. ಆದರೆ ಇದಕ್ಕೆ ಕೆಎಟಿಯಿಂದ ತಡೆಯಾಜ್ಞೆ ತರಲಾಗಿತ್ತು.ಈಗ ಸೇವೆಯಿಂದಲೇ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಳ್ತಂಗಡಿ: ಹಾವು ಕಚ್ಚಿ ಮಹಿಳೆ ಸಾವು
ಬೆಳ್ತಂಗಡಿ: ಬಳಂಜ ಪರಾರಿ ಮನೆ ನಿವಾಸಿ ಸಂಜೀವ ಪೂಜಾರಿ ಅವರ ಪತ್ನಿ ವಿಮಲಾ (51) ಅವರು ವಿಷದ ಹಾವು ಕಚ್ಚಿದ ಪರಿಣಾಮ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಅವರು ಜೂ.28ರಂದು ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿತ್ತು. ತತ್‌ಕ್ಷಣ ಅವರಿಗೆ ಸ್ಥಳೀಯ ನಾಟಿ ವೈದ್ಯರಲ್ಲಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾ ಗಿ ತ್ತು. ಆರೋಗ್ಯ ಮತ್ತಷ್ಟು ಹಗ ದೆಟ್ಟ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾರು ಹೊಂಡಕ್ಕೆ ಬಿದ್ದು ಮೂವರಿಗೆ ಗಾಯ
ಬ್ರಹ್ಮಾವರ: ಇಲ್ಲಿನ ಉಪ್ಪಿನಕೋಟೆ ಬಳಿ ಮಂಗಳವಾರ ನಿಯಂತ್ರಣ ತಪ್ಪಿದ ಕಾರು ಹೊಂಡಕ್ಕೆ ಬಿದ್ದು ಕೌಸರ್‌, ಮಹಮ್ಮದ್‌ ಅನಾಸ್‌ ಹಾಗೂ ಚಾಲಕ ಗಾಯಗೊಂಡಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೈಟ್‌ನಲ್ಲಿ ಬೆಂಗ್ರೆಯ ಯುವತಿ ಸಂಕಷ್ಟದಲ್ಲಿ
ಮಂಗಳೂರು: ಉದ್ಯೋಗಕ್ಕೆ ತೆರಳಿ ಕುವೈತ್‌ನಲ್ಲಿ ತೊಂದರೆಗೆ ಸಿಲುಕಿರುವ ಭಾರತೀಯರ ಪ್ರಕರಣ ಬಹುತೇಕ ಸುಖಾಂತ್ಯ ಕಾಣುವ ಹಾದಿಯಲ್ಲಿರುವ ಹೊತ್ತಿ ನಲ್ಲಿ, ಮಂಗಳೂರಿನ ಬೆಂಗ್ರೆಯ ಓರ್ವ ಯುವತಿ ಕುವೈಟ್‌ನಲ್ಲಿ ಸರಿಯಾಗಿ ಸಂಬಳ ಸಿಗದೆ ಸಂಕಷ್ಟದಲ್ಲಿರುವ ಬಗ್ಗೆ ತಿಳಿದು ಬಂದಿದೆ.

ಸ್ಯಾಂಡ್‌ಪಿಟ್‌ ಬೆಂಗ್ರೆಯ ರೇಶ್ಮಾ ಸುವರ್ಣ ಅವರು ಆರು ತಿಂಗಳ ಹಿಂದೆ ಉದ್ಯೋಗದ ನಿಮಿತ್ತ ಕುವೈಟ್‌ಗೆ ಹೋಗಿದ್ದು, ಅಲ್ಲಿ ಸಂಕಷ್ಟದಲ್ಲಿ ಸಿಲುಕಿರುವುದಾಗಿ ಹೇಳಲಾಗಿದೆ.
ಅವರು ತನಗೆ ನೆರವಾಗಬೇಕೆಂದು ಮನವಿ ಮಾಡಿ ಆಡಿಯೋ ಸಂದೇಶವನ್ನು ಕಳುಹಿಸಿದ್ದಾರೆ.

ಮಚ್ಚಿನ: ಅಕ್ರಮ ಮದ್ಯ ವಶ
ಬೆಳ್ತಂಗಡಿ: ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದಾಗ ಮಚ್ಚಿನ ಗ್ರಾಮದ ಪೆರ್ನಡ್ಕದ ದೇವರಗುಂಡಿಯಲ್ಲಿ ಮಂಗಳವಾರ ಓರ್ವನನ್ನು ಬಂಧಿ ಸಲಾಗಿದೆ.

ತಣ್ಣೀರುಪಂಥ ಗ್ರಾಮದ ಅಳಕೆ ಮನೆ ನಿವಾಸಿ ಅರುಣ್‌ ಕುಮಾರ್‌ ಎಂಬ ವ ನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 4.590 ಲೀ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಆತ ನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಹಾಗೂ ತಂಡದವರು ಕಾರ್ಯಾಚರಣೆ ನಡೆಸಿದ್ದಾರೆ.

ವಾಹನ ಢಿಕ್ಕಿ: ಬೈಕ್‌ ಸವಾರ ಸಾವು
ಉಡುಪಿ: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಸುಮಾರು 40 ವರ್ಷ ವಯಸ್ಸಿನ ಬೈಕ್‌ ಸವಾರರೋರ್ವರು ಮೃತಪಟ್ಟ ಘಟನೆ ರಾ.ಹೆದ್ದಾರಿ 66ರ ಕಲ್ಯಾಣಪುರ ಸಂತೆಕಟ್ಟೆ ಸೇತುವೆ ಬಳಿ ಬುಧವಾರ ರಾತ್ರಿ ಸಂಭವಿಸಿದೆ.

ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೈಕ್‌ಗೆ ಯಾವುದೋ ವಾಹನ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ನಿಯಂತ್ರಣ ತಪ್ಪಿ ತೋಟಕ್ಕಿಳಿದ ಜೀಪ್‌
ಮಡಿಕೇರಿ: ಸುಂಟಿಕೊಪ್ಪ ಸಮೀಪದ ಶಾಂತಿ ಗೇರಿ ತಿರುವಿನ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಮರಕ್ಕೆ ಢಿಕ್ಕಿ ಹೊಡೆದು ತೋಟಕ್ಕೆ ನುಗ್ಗಿದೆ.ಬೆಂಗಳೂರಿನಿಂದ 6 ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಮಡಿಕೇರಿಗೆ ಪ್ರವಾಸಕ್ಕೆಂದು ಸ್ಕಾರ್ಪಿಯೋ ಜೀಪಿನಲ್ಲಿ ಆಗಮಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಚಾಲಕ ಸಹಿತ ನಾಲ್ವರು ಗಾಯಗೊಂಡು ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಆರ್ಯಾಪು: ಮನೆಯಿಂದ ಕಳವು
ಪುತ್ತೂರು: ಆರ್ಯಾಪು ಗ್ರಾಮದ ದೇವಸ್ಯದ ಮನೆಯೊಂದರ ಬೀಗ ಮುರಿದು ನುಗ್ಗಿದ ಕಳ್ಳರು ಚಿನ್ನದ ಸರ, ಮೊಬೈಲ್‌ ಹಾಗೂ ನಗದನ್ನು ಕಳವು ಮಾಡಿದ್ದಾರೆ.

ಬುಧವಾರ ಹಾಡಹಗಲೇ ಘಟನೆ ನಡೆದಿದ್ದು, ಮನೆಮಂದಿ ಕೆಲಸಕ್ಕೆ ಹೋಗಿದ್ದಾಗ ಕಳ್ಳರು ನುಗ್ಗಿ ಕಪಾಟಿನಲ್ಲಿದ್ದ 50 ಸಾವಿರ ರೂ.ಮೌಲ್ಯದ ಚಿನ್ನದ ಸರ, ಮೊಬೈಲ್‌ ಹಾಗೂ 800 ರೂ. ಕೊಂಡೊಯ್ದಿದ್ದಾರೆ.

ರಂಜಿತ್‌ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾವಳಮೂಡೂರು: ಆತ್ಮಹತ್ಯೆ
ಪುಂಜಾಲಕಟ್ಟೆ: ಜೀವನದಲ್ಲಿ ಜುಗುಪ್ಸೆಗೊಂಡಿದ್ದ ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕೋಡಿಹಳ್ಳಿಯ ನಿವಾಸಿ ಸುಮಂತ್‌ ರಾವ್‌(39) ಅವರು ಕಾವಳಮೂಡೂರು ಗ್ರಾಮದ ಅಲಂಗಾರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಅಲಂಗಾರಿನ ತಿಂಡಿ ತಯಾರಕ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದರು.ಘಟಕದ ಪಕ್ಕದ ರೂಂನಲ್ಲಿಯೇ ವಾಸವಾಗಿದ್ದ ಅವರ ಶವ ಬುಧವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆತ್ಮಹತ್ಯೆಗೆ ಸ್ಪಷ್ಟ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.

ಜಾನುವಾರು ಸಾಗಾಟ: ಆರೋಪಿಗಳು ಪರಾರಿ
ಕಡಬ: ರಾಮಕುಂಜದ ಕುಂಡಾಜೆ ಬಳಿ ಮಂಗಳವಾರ ಸಂಜೆ ಅಕ್ರಮವಾಗಿ ಜಾನು ವಾರು ಸಾಗಿ ಸು ತ್ತಿ ದ್ದು ದನ್ನು ಪತ್ತೆಹಚ್ಚಿದ ಕಡಬ ಪೊಲೀಸರು, 1 ಗಂಡು ಕರು ಹಾಗೂ ಅದನ್ನು ಸಾಗಿಸಲು ಬಳಸಿದ್ದ ಪಿಕಪ್‌ ವಾಹನವನ್ನು ವಶಪಡಿಸಿ
ಕೊಂಡಿದ್ದಾರೆ.

ಪಿಕಪ್‌ನಲ್ಲಿದ್ದ ಕೊçಲ ನಿವಾಸಿ ಬಶೀರ್‌ ಹಾಗೂ ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಂಜೂರು: ಆತ್ಮಹತ್ಯೆ
ಬ್ರಹ್ಮಾವರ: ಕೆಂಜೂರು ಕೋಳಿಫಾರಂನಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದಾಗ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಉದಯ ನಾಯ್ಕ (48) ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next