Advertisement

ಕೃತಿಕ್‌ ಸಾಲ್ಯಾನ್‌ ಕೊಲೆ ಪ್ರಕರಣದ ಹಿಂದೆ ಸಾಲ-ಮಹಿಳೆ

12:15 AM Oct 24, 2022 | Team Udayavani |

ಹಿರಿಯಡ್ಕ: ತಿಂಗಳ ಹಿಂದೆ ನಡೆದ ಕುಕ್ಕೆಹಳ್ಳಿ ಗ್ರಾಮದ ಬಜೆ ನಿವಾಸಿ ಕೃತಿಕ್‌ ಜೆ. ಸಾಲ್ಯಾನ್‌ (22) ಆತ್ಮಹತ್ಯೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಆತ್ಮಹತ್ಯೆ ಅಲ್ಲ ಕೊಲೆ ಎಂದು ಸಾಬೀತಾಗಿದೆ. ಕುಕ್ಕೆಹಳ್ಳಿ ನಿವಾಸಿ ದಿನೇಶ ಸಫ‌ಲಿಗ (42) ಬಂಧಿತ ಕೊಲೆ ಆರೋಪಿ.

Advertisement

ಘಟನೆ ವಿವರ
ಸೆ. 14ರಂದು ಹಿರಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಕ್ಕೆಹಳ್ಳಿ-ಬಜೆಯ ಹಾಡಿಯಲ್ಲಿ ಕೃತಿಕ್‌ ಸಾಲ್ಯಾನ್‌ ನೇಣು ಬಿಗಿದ ಸ್ಥಿತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತ್ತು.

ಬಳಿಕ ಮೃತ ಕೃತಿಕ ಸಂಬಂಧಿಕರು ಕೃತಿಕನ ಸಾವು ಹಾಗೂ ಆತನ ಬ್ಯಾಂಕ್‌ನಲ್ಲಿದ್ದ ಲಕ್ಷಾಂತರ ರೂ. ಹಣವನ್ನು ಸಂಪೂರ್ಣ ಡ್ರಾ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಉಪಾಯದಿಂದ ಕೊಲೆ
ಆರೋಪಿ ದಿನೇಶ್‌ ತಾನು ಪಡೆದ ಸಾಲವನ್ನು ತೀರಿಸಬಾರದೆಂದು ಎಂಬ ಕಾರಣಕ್ಕಾಗಿ ಕೃತಿಕನನ್ನು ಅತ್ಯಂತ ಉಪಾಯದಿಂದ ಪೂರ್ವಯೋಜನೆ ಮಾಡಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದನು. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆದರೆ ಆತ್ಮಹತ್ಯೆ ಬಗ್ಗೆ ಸಂದೇಹ ಇದ್ದ ಕಾರಣ ಮತ್ತಷ್ಟು ತನಿಖೆ ಮಾಡಿದಾಗ ಈ ಎಲ್ಲ ವಿಚಾರಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ.

ಅದರಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಹಿರಿಯಡ್ಕ ಎಸ್‌ಐ ಅನಿಲ್ ಬಿ.ಎಂ. ತಂಡ ಮೃತನ ಬ್ಯಾಂಕ್‌ ಖಾತೆಯ ಮಾಹಿತಿ, ಬ್ಯಾಂಕಿನ ಸಿಸಿ ಟಿವಿ, ಸ್ಥಳೀಯ ಮಾಹಿತಿ, ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಫೋನ್‌ ಮಾಹಿತಿಗಳನ್ನು ಸಂಗ್ರಹಿಸಿ ಗೆಳೆಯರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಸಂಬಂಧಿ ದಿನೇಶ ಸಫ‌ಲಗನ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಅವರೊಳಗೆ ಹಣದ ವ್ಯವಹಾರ ನಡೆದಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದರು.

Advertisement

“ನೀನು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡು, ಆಕೆ ನಿನಗೆ ಸಿಗುತ್ತಾಳೆ’
ಬಲ್ಲ ಮೂಲಗಳ ಮಾಹಿತಿಯಂತೆ 10 ವರ್ಷಗಳ ಕಾಲ ಮುಂಬಯಿಯ ಹೊಟೇಲ್‌ನಲ್ಲಿ ಉದ್ಯೋಗಿಯಾಗಿದ್ದ ದಿನೇಶ್‌, ಹಣದ ಸಮಸ್ಯೆಯಿಂದ ಊರಿಗೆ ಬಂದಿದ್ದ. ಸಂಬಂಧಿಕ ಕೃತಿಕನ ಗೆಳೆತನ ಬೆಳೆಸಿಕೊಂಡು ಹಂತ ಹಂತವಾಗಿ ಆತನಿಂದ ಒಟ್ಟು ಸುಮಾರು 9 ಲ.ರೂ.ಗಳನ್ನು ಪಡೆದುಕೊಂಡಿದ್ದ. ಈ ನಡುವೆ ಕೃತಿಕ್‌ ಮಹಿಳೆಯೊಬ್ಬಳೊಂದಿಗೆ ಸ್ನೇಹದಿಂದಿದ್ದು ಆಕೆಯನ್ನು ವಿವಾಹ ವಾಗಬೇಕೆಂದುಕೊಂಡಿದ್ದ. ಇದನ್ನೇ ಅಸ್ತ್ರವನ್ನಾಗಿಸಿಕೊಂಡ ದಿನೇಶ್‌ ಸಫ‌ಲಿಗ “ನೀನು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಾಟಕ ಮಾಡು ಆಗ ಆಕೆ ಸುಲಭದಲ್ಲಿ ನಿನಗೆ ಸಿಗುತ್ತಾಳೆ’ ಎಂದು ಹೇಳಿ ಪುಸಲಾಯಿಸಿದ್ದ.

ಆರೋಪಿ ಡೆತ್‌ನೋಟ್‌ ಬರೆಯಿಸಿ ಆತನ ಕಿಸೆಯಲ್ಲಿಟ್ಟಿದ್ದ
ಆ ಮಹಿಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿ ಆತ್ಮಹತ್ಯೆಯ ಅಣಕು ವೀಡಿಯೋವನ್ನು ಮಾಡಿ ಆ ಮಹಿಳೆಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ ಎಂದು ದಿನೇಶ್‌, ಕೃತಿಕನನ್ನು ನಂಬಿಸಿದ್ದನು. ಮೊದಲೇ ಕೃತಿಕ್‌ನಿಂದ ಡೆತ್‌ನೋಟ್‌ ಬರೆಯಿಸಿಕೊಂಡು ಆತನ ಕಿಸೆಗೆ ಹಾಕಿದ್ದ.

ಸೆ. 14ರಂದು ಮನೆಯ ಹತ್ತಿರದ ಹಾಡಿಗೆ ಬರ ಮಾಡಿಕೊಂಡ ದಿನೇಶ, ಕುಣಿಕೆ ಹಗ್ಗವನ್ನು ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿ ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿ, ಕೃತಿಕನನ್ನು ಎತ್ತಿದ ಕೈಯನ್ನು ತಾನು ಒಮ್ಮೆಲೆ ಬಿಟ್ಟಿದ್ದ. ಅಲ್ಲದೇ ಕಾಲಿನ ಕೆಳಗೆ ಇದ್ದ ಕಲ್ಲನ್ನು ಜಾರಿಸಿದ ಪರಿಣಾಮವಾಗಿ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದು ಕೃತಿಕ್‌ ಮೃತಪಟ್ಟಿದ್ದ. ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next