ಮಂಗಳೂರು: ನಾಲ್ಕು ವರ್ಷಗಳ ಹಿಂದೆ ತಣ್ಣೀರುಬಾವಿ ನಿವಾಸಿ ಶಿವರಾಜ್ ಕರ್ಕೇರ ಅವರ ಹತ್ಯೆಗೈದ ಎಲ್ಲ ಆರೋಪಿಗಳನ್ನು ದ.ಕ. ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
2018ರ ಜ. 21ರಂದು ಸಂಜೆ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಆರೋಪಿಗಳಾದ ಅನೀಶ್, ವಿತರಾಜ್, ಸುನಿಲ್, ಮಲ್ಲೇಶ, ಧೀರಜ್, ಜೀವನ್, ಸತೀಶ್, ವಿಕ್ರಮ್, ಅಜಯ್, ಸುಮನ್ ಹಾಗೂ ಮನೋಜ್ ಅವರು ಬೊಕ್ಕಪಟ್ಣ ಬೆಂಗರೆಯ ನಿವಾಸಿ ರೌಡಿಶೀಟರ್ ಭರತೇಶ್ ಮತ್ತು ಅವರ ಅಣ್ಣಂದಿರ ಮೇಲಿನ ಪೂರ್ವ ದ್ವೇಷದಿಂದ ರೌಡಿ ಭರತೇಶ್‌ನ ಅಣ್ಣ ಶಿವರಾಜ್ ಕರ್ಕೇರ ಅವರು ಮನೆಯ ಟೆರೇಸ್ ಮೇಲೆ ರಾತ್ರಿ ಮಲಗುವ ಮಾಹಿತಿ ಪಡೆದು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಜ. 22ರಂದು ಬೆಳಗ್ಗಿನ ಜಾವ ಸುಮಾರು 4.30ಕ್ಕೆ ಅಪಾದಿತರು ಭರತೇಶನ ವಾಸದ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿವರಾಜ್‌ನನ್ನು ತಲವಾರು ಕೊಡಲಿಗಳಿಂದ ಹಲ್ಲೆಗೈದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪಣಂಬೂರು ಠಾಣೆಯ ಪೊಲೀಸರು 11 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಎಂ. ಜೋಷಿ, ಪ್ರಕರಣದಲ್ಲಿ ಆರೋಪಿಗಳ ಪರ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎನ್ನುವುದನ್ನು ಮನಗಂಡು ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಗಳ ಪರ ವಕೀಲರಾದ ವೇಣುಕುಮಾರ್, ಯುವರಾಜ್ ಕೆ. ಅಮೀನ್, ರಾಜೇಶ್ ಅಮಾrಡಿ, ವಿನಯಕುಮಾರ್, ಗಣೇಶ್ ವಾದಿಸಿದ್ದರು.