ಹೊಸದಿಲ್ಲಿ: “ನೀವು ನಮಗೆ 100 ಕೋಟಿ ರೂ. ಕೊಟ್ಟರೆ ಸಾಕು, ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿಸುತ್ತೇವೆ, ರಾಜ್ಯಪಾಲರನ್ನಾಗಿಸುತ್ತೇವೆ ಅಥವಾ ಯಾವುದಾದರೂ ಸರಕಾರಿ ಸಂಸ್ಥೆಗಳ ಮುಖ್ಯಸ್ಥರನ್ನಾಗಿಸುತ್ತೇವೆ’ ಎಂದು ಖಾಸಗಿ ವ್ಯಕ್ತಿಗಳಿಂದ ಕೋಟ್ಯಂತರ ರೂ. ಹಣ ಪೀಕುತ್ತಿದ್ದ ಆರೋಪದ ಮೇರೆಗೆ ನಾಲ್ವರನ್ನು ಸಿಬಿಐ ಬಂಧಿಸಿದೆ. ಆರೋಪಿಗಳಲ್ಲೊಬ್ಬನಾದ ರವೀಂದ್ರ ವಿಟ್ಟಲ್ ನಾಯ್ಕ ಕರ್ನಾಟಕದ ಬೆಳಗಾವಿಯವನು.
ಆರೋಪಿಗಳು ಅವಿತಿದ್ದ ಕಟ್ಟಡದ ಮೇಲೆ ರೈಡ್ ನಡೆದಾಗ ಈ ಗುಂಪಿನ ಒಬ್ಬ ಸದಸ್ಯ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾನೆ.
ಕಮಲಾಕರ್ ಪ್ರೇಮ್‌ಕುಮಾರ್ ಬಂದಗಾರ್(ಮಹಾರಾಷ್ಟ್ರದ ಲಾತೂರ್) ರವೀಂದ್ರ ವಿಟ್ಟಲ್ ನಾಯ್ಕ, ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬರೋರಾ ಹಾಗೂ ಮೊಹಮ್ಮದ್ ಐಜಾಜ್ (ದಿಲ್ಲಿ-ಎನ್‌ಸಿಆರ್) ಬಂಧಿತ ಇತರರು. ಇವರಲ್ಲಿ ಬಂದಗಾರ್ ಎಂಬುವರನ್ನು ರಾಜಕಾರಣಿಗಳ ಬಳಿ ತಾನೊಬ್ಬ ಹಿರಿಯ ಸಿಬಿಐ ಅಧಿಕಾರಿಯಾಗಿದ್ದು ತನಗೆ ಕೇಂದ್ರ ಸರಕಾರದ ಅತ್ಯುನ್ನತ ಅಧಿಕಾರಿಗಳು ಪರಿಚಯ ವಿದ್ದಾರೆಂದು ನಂಬಿಸಿ, ಉನ್ನತ ಸ್ಥಾನಮಾನ ಕೊಡಿಸುವು ದಾಗಿ ಹೇಳಿ ವಂಚಿಸುತ್ತಿದ್ದರೆಂದು ಆರೋಪಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?: ಯುವಕರ ತಂಡವೊಂದು ಶ್ರೀಮಂತ ಉದ್ಯಮಿಗಳು, ಸಿರಿವಂತ ರನ್ನು ಭೇಟಿ ಮಾಡಿ ಉನ್ನತ ಸಾಂವಿಧಾನಿಕ ಹುದ್ದೆಗಳ ಆಸೆ ತೋರಿಸಿ ಹಣ ವಸೂಲಿ ಮಾಡುತ್ತಿರುವ ಮಾಹಿತಿಯೊಂದು ಸಿಬಿಐಗೆ ಇತ್ತೀಚೆಗೆ ಸಿಕ್ಕಿತ್ತು. ಆ ಕುರಿತಂತೆ ತನಿಖೆ ನಡೆಸಿದಾಗ ರವೀಂದ್ರ ತಂಡ ಗಮನಕ್ಕೆ ಬಂದಿತು. ಈ ಯುವಕರು, ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಹೆಸರುಗಳನ್ನು ಅಥವಾ ವಿವಿಧ ರಾಜಕೀಯ ಪಕ್ಷಗಳ ನಾಯಕರೆಂದು ಹೇಳಿಕೊಂಡು ಹಣವಂತರಲ್ಲಿ ಸ್ನೇಹ ಬೆಳೆಸುತ್ತಿದ್ದುದು ತಿಳಿದುಬಂದಿತ್ತು.
ಈ ಕುರಿತಂತೆ ನಡೆಸಲಾದ ಹೆಚ್ಚಿನ ತನಿಖೆಯಲ್ಲಿ ಈ ಯುವಕರಲ್ಲಿ ಅಭಿಷೇಕ್ ಬೂರಾ ಎಂಬಾತ ಈ ಯುವಕರು ಹಾಗೂ ಶ್ರೀಮಂತರ ನಡುವೆ ಮದ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂತು. ಇವರಲ್ಲಿ ಬಂಡಗಾರ್, ಐಜಾಜ್‌ನಂಥ ಯುವಕನಿಗೆ ಯಾವುದೇ ಕೆಲಸವಾದರೂ ಒಪ್ಪಿಸಿ, ನಾನು ನಿಮಗೆ ದೊಡ್ಡ ಮೊತ್ತದ ಲಾಭ ಮಾಡಿ ಕೊಡುತ್ತೇನೆ ಎಂಬಂಥ ಸಂಭಾಷಣೆಗಳು ನಡೆದಿರುವು ದನ್ನು ದಾಖಲಿಸಲಾಗಿತ್ತು.