ಕೋಟ: ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಮೂವರು ಯುವಕರಲ್ಲಿ ಓರ್ವ ನೀರು ಪಾಲಾಗಿ ಸಾವನ್ನಪ್ಪಿದ್ದು, ಇಬ್ಬರು ಅಪಾಯದಿಂದ ಪಾರಾದ ಘಟನೆ ಸಾಲಿಗ್ರಾಮದ ಪಾರಂಪಳ್ಳಿ ಪಡುಕರೆ ಕಡಲ ಕಿನಾರೆಯಲ್ಲಿ ಶುಕ್ರವಾರ ಸಂಭವಿಸಿದೆ.
ಸ್ಥಳೀಯ ಪಡುಕೆರೆ ನಿವಾಸಿ ಭಾಸ್ಕರ್ ಮೊಗವೀರ ಅವರ ಪುತ್ರ ಸುಮಂತ್ (23) ಮೃತ ಯುವಕ. ಸ್ಥಳೀಯರಾದ ಸಂದೀಪ್, ಪ್ರಜ್ವಲ್ ಅಪಾಯದಿಂದ ಪಾರಾಗಿದ್ದಾರೆ. ಈ ಮೂವರು ಯುವಕರು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ಭಾರೀ ಗಾತ್ರದ ಅಲೆಗಳಿಗೆ ಸಿಕ್ಕಿ ದೋಣಿ ನಿಯಂತ್ರಣಕ್ಕೆ ಸಿಗದೆ ಮಗುಚಿಕೊಂಡಿದೆ.
ಈ ವೇಳೆ ದೋಣಿಯಲ್ಲಿದ್ದ ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದು, ಅಲೆಗಳ ಹೊಡೆತಕ್ಕೆ ಸಿಕ್ಕಿದ ಸುಮಂತ್ ಸಾಕಷ್ಟು ಹೊತ್ತು ಈಜಾಡಿ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದ. ಆದರೆ ಕೊನೆಗೂ ಕೈ ಸೋತು ನೀರು ಪಾಲಾಗಿದ್ದಾನೆ. ಸ್ಥಳೀಯರು ಬಲೆ ಮೂಲಕ ಆತನನ್ನು ಮೇಲೆತ್ತಿ ಜೀವನ್‌ಮಿತ್ರ ಆ್ಯಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಕೋಟ ಪೊಲೀಸ್ ಠಾಣಾಧಿಕಾರಿ ಮಧು ಬಿ. ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿದೇಶಕ್ಕೆ ತೆರಳುವವನಿದ್ದ
ಭಾಸ್ಕರ್ ಮೊಗವೀರ ಅವರ ಇಬ್ಬರು ಮಕ್ಕಳಲ್ಲಿ ಮೃತ ಸುಮಂತ್ ಹಿರಿಯವನಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾನೆ. ಬಡ ಕುಟುಂಬದವನಾದ ಈತ ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮುಂದಿನ ತಿಂಗಳು ವೀಸಾ ದೊರೆತು ವಿದೇಶಕ್ಕೆ ತೆರಳುವವನಿದ್ದ. ಅಷ್ಟರಲ್ಲೇ ಈ ರೀತಿಯ ದುರ್ಘಟನೆ ಸಂಭವಿಸಿದೆ.