ಉಡುಪಿ: ಮದುವೆ ಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು 20 ವರ್ಷ ಕಠಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಉಡುಪಿಯ ಕೊಡವೂರು ನಿವಾಸಿ ಕಿರಣ್ (28) ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದಾನೆ. ಸಂತ್ರಸ್ತ ಬಾಲಕಿ 16 ವರ್ಷದವಳಾಗಿದ್ದು ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬೆದರಿಸಿ ಮತ್ತೆ 2-3 ಬಾರಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರ ತಿಳಿದ ಆರೋಪಿ ಕಿರಣ್‌ನ ಸಹೋದರಿಯು ಯುವತಿ ಬಳಿ ಬಂದು ಆತನೊಂದಿಗೆ ಮದುವೆ ಮಾಡಿಸುವುದಾಗಿಯೂ ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಮಾತುಕತೆ ನಡೆಸಿದ್ದಳು.
ಸಂತ್ರಸ್ತೆ ಮನೆ ಸಮೀಪದವರು ಇವರಿಬ್ಬರ ಚಲನವಲನದ ಬಗ್ಗೆ ಬಾಲಕಿ ಪೋಷಕರ ಗಮನಕ್ಕೆ ತಂದಿದ್ದು ಅವರು ಆಕೆ ಬಳಿ ವಿಚಾರಿಸಿದಾಗ ನಡೆದ ಘಟನೆ ಹೇಳಿದ್ದಾಳೆ. ಬಳಿಕ ಉಡುಪಿ ಮಹಿಳಾ ಠಾಣೆಯಲ್ಲಿ ಬಾಲಕಿ ದೂರು ದಾಖಲಿಸಿದ್ದಳು. ಅದರಂತೆ ಕಿರಣ್ ಹಾಗೂ ಆತನ ಸೋದರಿಯ ಬಂಧನವಾಗಿತ್ತು. ಬಳಿಕ ಅವರಿಬ್ಬರು ಜಾಮೀನು ಪಡೆದಿದ್ದರು. ಅಂದಿನ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಕಲಾವತಿಯವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪೂರಕ ಸಾಕ್ಷಿಗಳು ಕಿರಣ್ ದೋಷಿ ಎಂಬುದನ್ನು ದೃಢಪಡಿಸುವಲ್ಲಿ ಅಭಿಯೋಜನೆಗೆ ಸಹಕಾರಿಯಾಗಿತ್ತು. ಕಿರಣ್ ಸಹೋದರಿ ಮೇಲಿನ ದೋಷಾರೋಪಣೆ ರುಜುವಾತಾಗದ ಹಿನ್ನೆಲೆ ದೋಷಮುಕ್ತಿಗೊಳಿಸಲಾಗಿದೆ.
ಅಪರಾಧಿ ಕಿರಣ್‌ಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಪೋಕ್ಸೊ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಬೆದರಿಕೆ ಹಾಕಿದ್ದಕ್ಕೆ 1 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಶಿಕ್ಷೆ ಮತ್ತು ನೊಂದ ಬಾಲಕಿಗೆ 4 ಲ. ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ.
ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.