ಮಲ್ಪೆ: ಮೀನುಗಾರ ಮುಖಂಡ ಯಶ್‌ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹತ್ಯೆ ಬೆದರಿಕೆ ನೀಡಿ, ತಲೆ ಕಡಿದವರಿಗೆ ರೂ. 10 ಲಕ್ಷ ನೀಡುವುದಾಗಿ ಬಹಿರಂಗವಾಗಿ ಪೋಸ್ಟ್ ಮಾಡಿ ಹತ್ಯೆಗೆ ಪ್ರಚೋದನೆ ನೀಡಿರುವುದನ್ನು ಕರ್ನಾಟಕ ಕರಾವಳಿಯ ಮೀನುಗಾರರ ಕ್ರಿಯಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಶುಕ್ರವಾರ ಕ್ರಿಯಾ ಸಮಿತಿಯ ವತಿಯಿಂದ ಉಡುಪಿ ಎಸ್‌ಪಿಗೆ ಮನವಿ ನೀಡಿ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಕಠಿನ ಕ್ರಮಕೈಗೊಳ್ಳ ಬೇಕು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜೀವ ಬೆದರಿಕೆ ಹಿನ್ನೆಲೆ ಯಲ್ಲಿ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿದೆ.
ಕ್ರಿಯಾ ಸಮಿತಿ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲಾ ಸಹ ಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಉಡುಪಿ ಮಹಾ ಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಸಹಿತ ಉಭಯ ಜಿಲ್ಲೆಯ ವಿವಿಧ ಸಂಘಟನೆಗಳಲ್ಲಿ ತೊಡಗಿಸಿ ಕೊಂಡಿ ರುವ ಯಶ್‌ಪಾಲ್ ಸುವರ್ಣ ಅವರು ಮೀನುಗಾರರ ಸಮಸ್ಯೆಗಳಿಗೆ ಸದಾ ಸ್ಪಂದಿ ಸುತ್ತಿದ್ದಾರೆ. ಮೀನುಗಾರರ ಪರವಾದ ಯೋಜನೆಗಳ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿರುವ ಅವರಿಗೆ ಜೀವ ಬೆದರಿಕೆ ಹಾಕಿರುವ ಈ ಕೃತ್ಯವನ್ನು ಮೀನುಗಾರ ಸಮುದಾಯ ತೀವ್ರವಾಗಿ ಖಂಡಿಸಿದೆ ಎಂದರು.
ನಿಯೋಗದಲ್ಲಿ ಕ್ರಿಯಾ ಸಮಿತಿ ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್, ಕೋಶಾಧಿಕಾರಿ ಸೋಮನಾಥ್ ಕಾಂಚನ್, ಮುಖಂಡರಾದ ದಯಾ ನಂದ ಕುಂದರ್, ರತ್ನಾಕರ ಸಾಲ್ಯಾನ್, ಸುಭಾಸ್ ಮೆಂಡನ್, ಸುಧಾಕರ ಮೆಂಡನ್, ನಾಗರಾಜ್ ಬಿ. ಕುಂದರ್, ವಿಠಲ ಕರ್ಕೇರ, ಶಶಿಕಾಂತ್ ಕುಂದರ್ ಬೆಂಗ್ರೆ, ಮನೋಹರ್ ಕುಂದರ್, ಪ್ರತಾಪ್ ಸಾಲ್ಯಾನ್, ವಿಶ್ವನಾಥ್ ಶ್ರೀಯಾನ್, ಚಂದ್ರಶೇಖರ್ ಶ್ರೀಯಾನ್, ಪ್ರಶಾಂತ್ ತಿಂಗಳಾಯ, ಪ್ರಶಾಂತ್ ಕುಮಾರ್, ಅಶೋಕ್ ಮೆಂಡನ್, ಜ್ಞಾನೇಶ್ವರ ಕೋಟ್ಯಾನ್, ಸುರೇಶ್ ಕುಂದರ್, ಪ್ರಕಾಶ್ ಬಂಗೇರ, ಜಗನ್ನಾಥ ಅಮೀನ್, ಪ್ರಭಾಕರ ಸುವರ್ಣ ಇದ್ದರು.
ಉಗ್ರ ಹೋರಾಟ
ಅ. ಭಾ. ಕ್ರಿಯಾ ಸಮಿತಿಯ ರಾಷ್ಟ್ರೀಯ ಪ್ರಧಾನ ಸಂಘಟನ ಕಾರ್ಯದರ್ಶಿಯಾಗಿ ಸಮಸ್ತ ಮೀನುಗಾರರ ಆಶಾಕಿರಣ ಯಶ್‌ಪಾಲ್ ಸುವರ್ಣರಿಗೆ ಈ ರೀತಿಯ ಬೆದರಿಕೆಗಳು ಬಂದರೆ ಮೀನುಗಾರಿಕೆಗೂ ತೊಂದರೆಯಾಗಲಿದೆ. ಸರಕಾರ ಈ ಬಗ್ಗೆ ತತ್‌ಕ್ಷಣ ಗಮನ ಹರಿಸಬೇಕು ಇಲ್ಲದಿದ್ದರೆ ಮೂರು ಜಿಲ್ಲೆಗಳ ಸಮಸ್ತ ಮೀನುಗಾರರ ಜತೆ ಸೇರಿ ಉಗ್ರ ಹೋರಾಟ ಮಾಡಬೇಕಾದೀತು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಹೇಳಿದ್ದಾರೆ.