ಬೆಂಗಳೂರು: ಹಣಕಾಸಿನ ವಿಚಾರ ಹಾಗೂ ಹಳೇ ದ್ವೇಷಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆಗೈದಿರುವ ಘಟನೆ ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬಾಣಸವಾಡಿಯ ಆರ್.ಎಸ್.ಪಾಳ್ಯ ನಿವಾಸಿ ಕಾರ್ತಿಕೇಯನ್(40) ಕೊಲೆಯಾದವ.
ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಕಾರ್ತಿಕೇಯನ್ ಮನೆ ಸಮೀಪದಲ್ಲಿ ವಾಯುವಿಹಾರ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ನಾಲ್ಕೈದು ಬೈಕ್‌ಗಳಲ್ಲಿ ಬಂದ ಐದಾರು ಮಂದಿ ದುಷ್ಕರ್ಮಿಗಳು ಕಾರ್ತಿಕೇಯನ್ ಮೇಲೆ ದಾಳಿ ನಡೆಸಿದ್ದಾರೆ. ಆಗ ಪ್ರಾಣ ಉಳಿಸಿಕೊಳ್ಳಲು ಕಾರ್ತಿಕೇಯನ್ ಓಡಿದ್ದಾರೆ. ಆದರೂ ಬಿಡದ ಹಂತಕರು, ಸಾರ್ವಜನಿಕವಾಗಿ ನಡು ರಸ್ತೆಯಲ್ಲಿ ಅಟ್ಟಾಡಿಸಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಈ ಹಿಂದೆ ಕಾರ್ತಿಕೇಯನ್ ವಿರುದ್ಧ ಬಾಣಸವಾಡಿ ಮತ್ತು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿಪಟ್ಟಿ ತೆರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ಕೋರ್ಟ್ ಮೂಲಕ ಕಾರ್ತಿಕೇಯನ್ ಅದನ್ನು ರದ್ದು ಪಡಿಸಿಕೊಂಡಿದ್ದ. ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿಕೊಂಡು ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು. ಇತ್ತೀಚೆಗೆ ಕೆಲ ವಿವಾದಿತ ಜಾಗಗಳಿಗೆ ಬೇಲಿ ಹಾಕಿಕೊಂಡಿದ್ದ ಕಾರ್ತಿಕೇಯನ್, ಮೈಕಲ್ ಮಂಜು ಮತ್ತು ತಂಡದ ಜತೆ ಜಗಳ ಮಾಡಿಕೊಂಡಿದ್ದರು. ಅಲ್ಲದೆ, ಗನ್ ತೋರಿಸಿ ಮಂಜುಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ.
ಹೀಗಾಗಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದ್ದು, ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.