ಸಿರಿಗೆರೆ ; ಭರಮಸಾಗರ ಹತ್ತಿರದ ಇಸಾಮುದ್ರ ಗ್ರಾಮದಲ್ಲಿ ಶುಕ್ರವಾರ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಅಮಾನುಷವಾಗಿ ಕೊಲೆ ಮಾಡಿದ ನಂತರ ಮಡುಗಟ್ಟಿದ ಊರಿಗೆ ಶಾಸಕ ಎಂ. ಚಂದ್ರಪ್ಪ ಭೇಟಿ ನೀಡಿದ ವೇಳೆ ಕುಟುಂಬ ಸದಸ್ಯರ ದುಃಖ ಕಟ್ಟೆಯೊಡೆದು ಕಣ್ಣೀರಧಾರೆ ಹರಿದ ಪ್ರಸಂಗ ನಡೆಯಿತು.
ದುಃಖತಪ್ತರಿಗೆ ಸಾಂತ್ವನದ ಮಾತು ಹೇಳಲು ಬಂದ ಶಾಸಕರು ಕುಟುಂಬಸ್ಥರ ರೋಧನದಿಂದ ಮರುಗಿ ಅವರೂ ಸಂಕಟದಲ್ಲಿ ಪಾಲುಗೊಳ್ಳುವಂತಾಯಿತು. ಕೊಲೆಯಾದ ಬಾಲಕಿಯ ಸಹೋದರಿಯ ರೋಧನ ಆಕಾಶ ಮುಟ್ಟುವಂತಿತ್ತು. ಶಾಸಕ ಎಂ. ಚಂದ್ರಪ್ಪ ಅವರನ್ನೆಲ್ಲಾ ಸಂತೈಸಿ ಧೈರ್ಯದಿಂದಿರಲು ತಿಳಿಹೇಳಿದರು.
ಇದುವರೆಗೆ ನಗರ ಪ್ರದೇಶಗಳಲ್ಲಿಯಷ್ಟೆ ನಡೆಯುತ್ತಿದ್ದ ಇಂತಹ ಪೈಶಾಚಿಕ ಕೃತ್ಯಗಳು ಗ್ರಾಮಾಂತರ ಪ್ರದೇಶಗಳಿಗೆ ಹಬ್ಬಿರುವುದು ವ್ಯಸನದ ಸಂಗತಿ. ದುಷ್ಟರನ್ನು ಹಿಮ್ಮೆಟ್ಟಿಸಲು ನಮ್ಮ ಪೊಲೀಸ್ ಇಲಾಖೆ ಸದೃಢವಾಗಿದ್ದು ಅಂತಹ ಕೆಲಸವನ್ನು ಕೂಡಲೆ ಮಾಡಲಾಗುವುದು. ಇಸಾಮುದ್ರ ಗ್ರಾಮದಲ್ಲಿ ನಡೆದಿರುವ ಈ ಕೃತ್ಯ ಹಳ್ಳಿಗಾಡಿನ ಜನರ ನಿದ್ದೆಗೆಡಿಸಿದೆ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ನಿರ್ದಯವಾಗಿ ಕೊಲೆ ಮಾಡಿರುವ ದುಷ್ಟರನ್ನು ಪತ್ತೆ ಮಾಡಿ ಕೂಡಲೆ ಬಂಧಿಸಬೇಕು ಎಂದು ಈ ಸಂದರ್ಭದಲ್ಲಿ ಶಾಸಕ ಎಂ. ಚಂದ್ರಪ್ಪ ಹೇಳಿದರು.
ಇದನ್ನೂ ಓದಿ :ವ್ಯಕ್ತಿ ನಾಪತ್ತೆಯಾಗಿ ಹನ್ನೆರಡು ದಿನವಾದರೂ ಪತ್ತೆಯಾಗದ ದೇಹ : ಕಣ್ಣೀರಿನಲ್ಲಿ ಕುಟುಂಬಸ್ಥರು
ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಾದ ಎಲ್ಲಾ ನೆರವನ್ನು ಸರ್ಕಾರದಿಂದ ದೊರಕಿಸಿಕೊಡಲು ಯತ್ನಿಸುವುದಾಗಿ ತಿಳಿಸಿದ ಶಾಸಕ ವೈಯುಕ್ತಿಕ ನೆರವಾಗಿ 50 ಸಾವಿರ ರೂಗಳನ್ನು ಕುಟುಂಬಕ್ಕೆ ನೀಡಿದರು.
ದುಷ್ಟರನ್ನು ಬಂಧಿಸಲು ಪೊಲೀಸ್ ಇಲಾಖೆ ಈಗಾಗಲೇ ವಿಶೇಷ ತನಿಖಾ ದಳವನ್ನು ನೇಮಿಸಿದ್ದು ಗ್ರಾಮದಲ್ಲಿ ಪೊಲೀಸರ ಗಸ್ತನ್ನು ಸಹ ಹೆಚ್ಚಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಒಂದೆರಡು ದಿನಗಳಲ್ಲಿ ಪತ್ತೆ ಹಚ್ಚುವ ವಿಶ್ವಾಸ ಇಲಾಖೆಗೆ ಇದೆ ಎಂದು ವಿಶೇಷ ತನಿಖಾ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಜಿಪಂ ಸದಸ್ಯ ಡಿ.ವಿ. ಶರಣಪ್ಪ, ಕೋಗುಂಡೆ ಎಚ್.ಎಂ. ಮಂಜುನಾಥ್, ತಾಪಂ ಸದಸ್ಯ ಕಲ್ಲೇಶ್, ಬಿಜೆಪಿ ಮುಖಂಡ ಸಾಮಿಲ್ ಶಿವಣ್ಣ, ಸಿರಿಗೆರೆ ಗ್ರಾಪಂ ಅಧ್ಯಕ್ಷ ಕೆ.ಬಿ. ಮೋಹನ್, ವೃತ್ತ ನಿರೀಕ್ಷಕ ಮಧು, ಹೊಳಲ್ಕೆರೆ ವೃತ್ತ ನಿರೀಕ್ಷಕ ರವೀಶ್, ಪೊಲೀಸ್ ವಿಶೇಷ ದಳದ ತನಿಖಾಧಿಕಾರಿಗಳು ಮುಂತಾದವರು ಜೊತೆಗಿದ್ದರು.