ಬೆಂಗಳೂರು : ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಶೇ.20ರಷ್ಟು ಲಾಭಾಂಶ ಕೊಡುವುದಾಗಿ ಕಂಪನಿಯೊಂದನ್ನು ತೆರೆದು, ಈ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಮೂವರು ಅರೋಪಿಗಳು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಎಂಬುವರನ್ನು ಬಂಧಿಸಲಾಗಿದೆ. ಇದೇ ವೇಳೆ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳು ಪೋಮ್ ಎಕ್ಸ್ ಎಂಬ ಕಂಪನಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದರು. ಅಲ್ಲದೆ, ಮೂವರು ಸುಮಾರು 3-4 ವರ್ಷಗಳಿಂದ ಇದೇ ರೀತಿಯ ವಿವಿಧ ಹೆಸರಿನ ಕಂಪನಿಗಳನ್ನು ತೆರೆದು ವಂಚಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಈ ಮೊದಲು ಇಎಸ್‌ಪಿಎನ್ ಗ್ಲೋಬಲ್(ಈ-ಓರಾಕಲ್) ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿಸಿ, ಚೈನ್‌ಲಿಂಕ್ ಮಾದರಿಯಲ್ಲಿ ನೂರಾರು ಮಂದಿಗೆ ವಂಚಿಸಿದ್ದರು. ಇದೀಗ ಪೋಮ್ ಎಕ್ಸ್ ಕಂಪನಿಯನ್ನು ತೆರೆದಿದ್ದು, ಮೊದಲಿಗೆ ತಾವೇ ಕ್ರಿಪ್ಟೋ ಕರೆನ್ಸಿ ಖರೀದಿಸಿದ್ದಾರೆ. ನಂತರ ಬೇರೆ ವ್ಯಕ್ತಿಗಳನ್ನು ಕರೆತಂದು ಅವರಿಂದ ಚೈನ್‌ಲಿಂಕ್ ಆಧಾರದಲ್ಲಿ ಎಡ-ಬಲದಲ್ಲಿ ಹಣ ಹೂಡಿಕೆ ಮಾಡಿಸಿದರೆ ಭಾರಿ ಲಾಭ ನೀಡುವ ಆಮಿಷವೊಡ್ಡಿದ್ದರು ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ
ಅಲ್ಲದೆ, 100 ಡಾಲರ್ ಹೂಡಿಕೆ ಮಾಡಿಸಿದರೆ ಶೇ.50 ರಷ್ಟು ಪ್ಯಾಕೇಜ್ ವ್ಯಾಲ್ಯೂ ಮೇಲೆ ಶೇ.10 ರಷ್ಟು ಲಾಭ, 300 ಡಾಲರ್ ಹೂಡಿಕೆ ಮಾಡಿದರೆ ಶೇ.11, 500 ಡಾಲರ್ ಹೂಡಿದರೆ ಶೇ.12, ಒಂದು ಸಾವಿರ ಡಾಲರ್ ಹೂಡಿಕೆ ಮಾಡಿದರೆ ಶೇ.13, ಐದು ಸಾವಿರ ಡಾಲರ್ ಹೂಡಿಕೆ ಮಾಡಿದರೆ ಶೇ.14 ಹಾಗೂ 10000 ಡಾಲರ್ ಹೂಡಿಕೆ ಮಾಡಿದರೆ ಶೇ.15 ರಷ್ಟು ಲಾಭ ಕೊಡುವುದಾಗಿ ಆಮಿಷವೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೆಲವರು ಕ್ರಿಪ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಿಸಿ ಕೋಟ್ಯಂತರ ರೂ. ವಂಚಿಸಲು ಮುಂದಾಗಿದ್ದರು ಎಂದು ಪೊಲೀಸರು ಹೇಳಿದರು.
ಈ ನಡುವೆ ಆರೋಪಿಗಳು ಅ.26ರಂದು ಯಲಹಂಕದ ಪಂಚತಾರ ಹೋಟೆಲ್‌ನಲ್ಲಿ ಕಾರ್ಯಕ್ರಮವೊಂದು ಆಯೋಜಿಸಿ ಪೋಮ್ ಎಕ್ಸ್ ಕಂಪನಿ ಬಗ್ಗೆ ಪ್ರಚಾರ ಕೂಡ ಮಾಡಿದ್ದರು. ಈ ವೇಳೆ ಕಂಪನಿಯೂ ಅಮೆರಿಕಾ, ಸಿಂಗಾಪೂರ್, ಚೀನಾ ದೇಶಗಳಲ್ಲೂ ಕಚೇರಿಗಳನ್ನು ತೆರೆಯಲಾಗಿದೆ ಎಂದು ಕಾರ್ಯಕ್ರಮದಲ್ಲಿ ಪ್ರಚಾರ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನಗರದ ಕೆಲವು ಉದ್ಯಮಿಗಳು, ಗಣ್ಯರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆಗೆ ಮುಂದಾಗಿದ್ದರು. ಅಷ್ಟರಲ್ಲಿ ಮಾಹಿತಿ ಪಡೆದ ಸಿಸಿಬಿ ಎಸಿಪಿ ಜಗನಾಥ್ ರೈ ಮತ್ತು ಇನ್‌ಸ್ಪೆಕ್ಟರ್ ಮಂಜು ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.