ಹುಬ್ಬಳ್ಳಿ: ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡುವುದರ ಜೊತೆಗೆ ವಿಭಿನ್ನವಾಗಿ ಯೋಚಿಸಲು ಆರಂಭಿಸಿದರೆ ಅಪರಾಧ ಚಟುವಟಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವೆಂದು ಎಪಿಎಂಸಿ-ನವನಗರ ಪೋಲಿಸ್ ಠಾಣೆ ಇನ್ಸ್‌ಪೆಕ್ಟರ್ ಪ್ರಭು ಸುರೇನ್ ಹೇಳಿದರು.
ಸಂಗೊಳ್ಳಿ ರಾಯಣ್ಣ ನಗರದಲ್ಲಿ ಹು-ಧಾ ಉತ್ತರ ವಿಭಾಗದ ಎಪಿಎಂಸಿ-ನವನಗರ ಪೊಲೀಸ್ ಠಾಣೆ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಅಂತರ್ಜಾಲ ಅಪರಾಧ ತಡೆಗಟ್ಟುವ ಹಾಗೂ ಮಾದಕದ್ರವ್ಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಬೆಳೆದಂತೆ, ಸಮಾಜ ಅಭಿವೃದ್ಧಿ ಹೊಂದಿದಂತೆ ಅಪರಾಧಿಗಳು ಯೋಚಿಸುವ ರೀತಿ, ನಡೆಸುವ ದುಷ್ಕೃತ್ಯಗಳ ವಿಧಾನಗಳೂ ಬದಲಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಯೋಚನಾ ವಿಧಾನ ಬದಲಿಸಿದರೆ ಅಪರಾಧಗಳ ಸಂಖ್ಯೆ ನಿಯಂತ್ರಿಸಲು ಸಾಧ್ಯ. ಬೆಲೆಬಾಳುವ ಆಭರಣಗಳನ್ನು ಬ್ಯಾಂಕಿನ ಲಾಕರ್‌ನಲ್ಲಿಡುವುದು, ಮನೆಯ ಸುತ್ತಮುತ್ತ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸುವುದು, ಮುಖ್ಯ ಬಾಗಿಲುಗಳು ಭದ್ರವಾಗಿರುವಂತೆ ನೋಡಿಕೊಳ್ಳುವುದು, ಊರಿಗೆ ಹೋಗುವಾಗ ಮನೆಯಲ್ಲಿ ಯಾರಾದರು ಒಬ್ಬರು ಇರುವಂತೆ ವ್ಯವಸ್ಥೆ ಮಾಡುವುದು ಸಾರ್ವಜನಿಕರ ಜವಾಬ್ದಾರಿ ಎಂದರು.
ಅಪರಿಚಿತ ವ್ಯಕ್ತಿಗಳು ತಮ್ಮ ಮನೆ ಸುತ್ತಮುತ್ತ ಅಥವಾ ಬಡಾವಣೆಯಲ್ಲಿ ಸಂಶಯಾಸ್ಪದವಾಗಿ ಸುಳಿದಾಡುವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ತಿಳಿಸಿದರೆ ಮುಂದೆ ನಡೆಯಬಹುದಾದ ಅಪರಾಧಗಳನ್ನು ಖಂಡಿತ ತಡೆಯಬಹುದು. ಅಪರಿಚಿತ ವ್ಯಕ್ತಿಗಳ ಜೊತೆಗೆ ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆ ಸಂಖ್ಯೆ, ಒಟಿಪಿ ಕೋಡ್ ಅಥವಾ ಆಧಾರ್ ಕಾರ್ಡ್ ಸಂಖ್ಯೆಯಂತಹ ಮಹತ್ವದ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದರು.
ಸಂಗೊಳ್ಳಿ ರಾಯಣ್ಣ ನಗರ ನಿವಾಸಿಗಳ ಕಲ್ಯಾಣ ಸಂಘದ ಅಧ್ಯಕ್ಷ ಎಸ್.ಸಿ. ಸಜ್ಜನಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಎಂ.ಆರ್. ಶೇಠ, ಎಸ್.ಎ. ಲಕ್ಷ್ಮೇಶ್ವರ, ಎಸ್.ಸಿ. ಬಿದರಿ, ವಾಳ್ವೇಕರ, ಎನ್.ಎಸ್. ಕೃಷ್ಣಾ, ಸುಷ್ಮಾ ನಾಯಕ, ಪುಷ್ಪಾ ಬುಲಬುಲೆ, ಪದ್ಮಾ ಪಾಟೀಲ, ಜಯಶ್ರೀ ಬಂಬೂರೆ ಮೊದಲಾದವರಿದ್ದರು. ಪುಂಡಲೀಕ ಆಲೂರ ಸ್ವಾಗತಿಸಿದರು. ವಿ.ಎಸ್. ಪಾಟೀಲ ವಂದಿಸಿದರು.