Advertisement

ಫುಟ್‌ಬಾಲ್‌ ಒಲವು ಹೊಂದಿದ್ದ ಮಾಹಿ ಕ್ರಿಕೆಟ್ ಬ್ಯಾಟ್ ಹಿಡಿದ ಹಿಂದಿದೆ ರೋಚಕ ಕಥೆ

08:44 PM Aug 15, 2020 | mahesh |

ಧೋನಿ ಅಪ್ಪಟ ಕ್ರೀಡಾಭಿಮಾನಿ. ಬಾಲ್ಯಂದಿಂದಲೇ ಕ್ರೀಡೆಯ ಹುಚ್ಚು. ಆದರೆ ಇವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿದ ಕ್ರಿಕೆಟ್‌ ಮೂರನೇ ಹಂತದ ಆದ್ಯತೆಯಾಗಿತ್ತು ಎಂಬುದೇ ಒಂದು ಸ್ವಾರಸ್ಯ! ಇದಕ್ಕೂ ಮೊದಲು ಧೋನಿ ಫುಟ್‌ಬಾಲ್‌ ಮತ್ತು ಬ್ಯಾಡ್ಮಿಂಟನ್‌ ಮೇಲೆ ವಿಪರೀತ ಒಲವು ಹೊಂದಿದ್ದರು. ಈ ಎರಡೂ ಕ್ರೀಡೆಗಳಲ್ಲಿ ಇವರು ಜಿಲ್ಲಾ ಹಾಗೂ ಕ್ಲಬ್‌ ಮಟ್ಟದ ಪಂದ್ಯಗಳಲ್ಲಿ ಆಡಿದ್ದರು.

Advertisement

ಫುಟ್‌ಬಾಲ್‌ನಲ್ಲಿ ಇವರದು ಗೋಲ್‌ಕೀಪರ್‌ ಕಾಯಕ. ಬಹುಶಃ ಮುಂದೆ ಕ್ರಿಕೆಟಿಗೆ ಬಂದಾಗ ವಿಕೆಟ್‌ ಕೀಪರ್‌ ಆಗಲು ಇದೇ ಸ್ಫೂರ್ತಿ ಆಯಿತೆಂಬುದರಲ್ಲಿ ಅನುಮಾನವಿಲ್ಲ. ಇವರ ಗೋಲ್‌ ಕೀಪಿಂಗ್‌ ಕೌಶಲ ಕಂಡ ಕೋಚ್‌ ಕೇಶವ್‌ ಬ್ಯಾನರ್ಜಿಗೆ, ಈತ ಕ್ರಿಕೆಟಿಗೆ, ಅದರಲ್ಲೂ ವಿಕೆಟ್‌ ಕೀಪಿಂಗಿಗೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದರು. ಬ್ಯಾನರ್ಜಿ ಅವರೇ ಧೋನಿ ಅವರ ಬಾಲ್ಯದ ಮೊದಲ ಕ್ರಿಕೆಟ್‌ ಕೋಚ್‌. ಮುಂದಿನದು ಇತಿಹಾಸ.

ರೈಲ್ವೇಯಲ್ಲಿ ಟಿಕೆಟ್‌ ಪರೀಕ್ಷಕ!
ಒಂದೆಡೆ ಕ್ರಿಕೆಟ್‌ನಲ್ಲಿ ಹಂತ ಹಂತವಾಗಿ ಮೇಲೆರುತ್ತ ಬಂದ ಧೋನಿ 1999-2000ದ ಸಾಲಿನಲ್ಲಿ ಬಿಹಾರ ಪರ ಅಸ್ಸಾಮ್‌ ವಿರುದ್ಧ ರಣಜಿ ಪದಾರ್ಪಣೆ ಮಾಡಿದರು. ಮೊದಲ ಇನ್ನಿಂಗ್ಸ್‌ ಗಳಿಕೆ 68 ರನ್‌. ಆ ವರ್ಷದ 5 ಪಂದ್ಯಗಳಿಂದ 283 ರನ್‌ ಗಳಿಸಿ ಭರವಸೆ ಮೂಡಿಸಿದರು.

ಬಹುಶಃ ಧೋನಿಗೆ ಇಪ್ಪತ್ತರ ಹರೆಯದಲ್ಲಿ ಅಭದ್ರತೆಯ ಚಿಂತೆ ಎದುರಾಗಿರಬೇಕು. ಬದುಕು ಹಾಗೂ ಸಂಪಾದನೆಯ ಪ್ರಶ್ನೆ ಕಾಡತೊಡಗಿತೋ ಏನೋ. ಕ್ರಿಕೆಟ್‌ ಒಂದೆಡೆ ಇರಲಿ, ಬೇರೊಂದು ಉದ್ಯೋಗ ಇದ್ದರೆ ಕುಟುಂಬಕ್ಕೂ ನೆರವು ಲಭಿಸಿದಂತಾಗುತ್ತದೆ ಎಂಬ ಯೋಚನೆ ಅವರಾದಗಿತ್ತು. ಆಗ ಕಂಡದ್ದೇ ರೈಲ್ವೇಯಲ್ಲಿ ಟಿಕೆಟ್‌ ಪರೀಕ್ಷಣಾಧಿಕಾರಿಯ ಕೆಲಸ (ಟ್ರಾವೆಲಿಂಗ್‌ ಟಿಕೆಟ್‌ ಎಕ್ಸಾಮಿನರ್‌-ಟಿಟಿಇ).
2001ರಿಂದ 2003ರ ತನಕ ಧೋನಿ ಆಗ್ನೇಯ ರೈಲ್ವೇ ವ್ಯಾಪ್ತಿಗೆ ಒಳಪಡುವ ಖರಗ್‌ಪುರ್‌ ರೈಲ್ವೇ ಸ್ಟೇಷನ್‌ನಲ್ಲಿ ಈ ಹುದ್ದೆ ನಿಭಾಯಿಸಿದರು.

ಬ್ಯಾಟಿಂಗ್‌ ಶೈಲಿ ಸರಿ ಇಲ್ಲ!
ತನ್ನ ಕ್ರಿಕೆಟ್‌ ನಂಟು ಬರೀ ಬಿಹಾರಕ್ಕೆ ಸೀಮಿತವಾಗುವುದು ಅವರಿಗೆ ಇಷ್ಟವಿರಲಿಲ್ಲ. 2004ರ ವೇಳೆ ಧೋನಿ ಪೂರ್ವ ವಲಯ ತಂಡದ ಬಾಗಿಲು ತಟ್ಟತೊಡಗಿದರು. ಆದರೆ ಇವರದು ಅಸಾಂಪ್ರದಾಯಿಕ ಶೈಲಿಯ ಬ್ಯಾಟಿಂಗ್‌ ಎಂಬ ಕಾರಣಕ್ಕೆ 2004ರ ದುಲೀಪ್‌ ಟ್ರೋಫಿ ತಂಡದಲ್ಲಿ ಅವಕಾಶ ನಿರಾಕರಿಸಲಾಯಿತು. ಅಂದು ಪೂರ್ವ ವಲಯ “ದೇವಧರ್‌ ಟ್ರೋಫಿ’ ಚಾಂಪಿಯನ್‌ ಆಗಿ ಮೂಡಿಬಂದಿತ್ತು. ಇದರ ಭಾಗವಾಗುವ ಅವಕಾಶ ಧೋನಿಗೆ ತಪ್ಪಿಹೋಯಿತು.ಆದರೆ ಅದೃಷ್ಟ ಚೆನ್ನಾಗಿತ್ತು. ಅದೇ ವರ್ಷ ಟೀಮ್‌ ಇಂಡಿಯಾಕ್ಕೆ ಕರೆ ಬಂತು.

Advertisement

ಅದು ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್‌ ಏಕದಿನ ಪಂದ್ಯ. ಸೌರವ್‌ ಗಂಗೂಲಿ ಸಾರಥ್ಯ. ಮೊದಲ ಪಂದ್ಯದಲ್ಲಿ ಧೋನಿ ಸಾಧನೆ ಮಾತ್ರ ಶೂನ್ಯ. ಮೊದಲ ಎಸೆತದಲ್ಲೇ ರನೌಟ್‌! ಕ್ಯಾಚ್‌, ಸ್ಟಂಪಿಂಗ್‌ ಏನೂ ಇಲ್ಲ. ಆದರೆ ಶೂನ್ಯವೇ ಕ್ರಿಕೆಟಿನ ವಿಪುಲ ಅವಕಾಶಗಳ ಹೆಬ್ಟಾಗಿಲು ಎಂಬುದು ಧೋನಿ ವಿಷಯದಲ್ಲೂ ನಿಜವಾಗಲು ಹೆಚ್ಚು ವೇಳೆ ಹಿಡಿಯಿಲ್ಲ.

ರಾಹುಲ್‌ ದ್ರಾವಿಡ್‌ ಉತ್ತರಾಧಿಕಾರಿ!
ಧೋನಿ ಕೈಗೆ ಗ್ಲೌಸ್‌ ಧರಿಸಿ ಭಾರತ ತಂಡವನ್ನು ಪ್ರವೇಶಿಸುವ ಮುನ್ನ ತಂಡದ ಕೀಪರ್‌ ಆಗಿದ್ದವರು ಬೇರೆ ಯಾರೂ ಅಲ್ಲ, ಅದು ರಾಹುಲ್‌ ದ್ರಾವಿಡ್‌! ಆಗ “ಗೋಡೆ’ಯ ಬ್ಯಾಟಿಂಗ್‌ ಫಾರ್ಮ್ ಕೈಕೊಟ್ಟಿತ್ತು. ಆದರೆ ಹೇಗಾದರೂ ಮಾಡಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೆಂಬ ಹಠ ನಾಯಕ ಗಂಗೂಲಿ ಅವರದಾಗಿತ್ತು. ಹೀಗಾಗಿ ದ್ರಾವಿಡ್‌ಗೆ ಕೀಪಿಂಗ್‌ ಜವಾಬ್ದಾರಿ ಹೊರಿಸಿ ಹನ್ನೊಂದರ ಬಳಗದಲ್ಲಿ ಉಳಿಸಿಕೊಂಡಿದ್ದರು ಗಂಗೂಲಿ! 2004ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತನಕ ದ್ರಾವಿಡ್‌ ಅವರೇ ಭಾರತ ತಂಡದ ಕೀಪರ್‌ ಆಗಿದ್ದರು. ಇಲ್ಲಿಂದ ಮುಂದೆ “ಧೋನಿ ಯುಗ’ ಆರಂಭಗೊಂಡಿತು.

ಮೋಡಿ ಮಾಡುವ ಹೆಲಿಕಾಪ್ಟರ್‌ ಶಾಟ್‌!
ಧೋನಿ ಮೂಲತಃ ಹೊಡಿ-ಬಡಿ ಶೈಲಿಯ ಆಟಗಾರ. ಮುನ್ನುಗ್ಗಿ ಬಾರಿಸುವುದರಲ್ಲೇ ಅವರಿಗೆ ಹೆಚ್ಚಿನ ಆಸಕ್ತಿ. “ಶೀಶ್‌ ಮಹಲ್‌ ಟೂರ್ನಿ’ ವೇಳೆ ಕೋಚ್‌ ದೇವಲ್‌ ಸಹಾಯ್‌ ಅವರು ಧೋನಿಯ ಪ್ರತಿಯೊಂದು ಸಿಕ್ಸರ್‌ಗೂ 50 ರೂ. ಬಹುಮಾನದ ಆಮಿಷ ಒಡ್ಡುತ್ತಿದ್ದರು. ಇದನ್ನು ಸವಾಲಾಗಿ ಸ್ವೀಕರಿಸುತ್ತಿದ್ದ ಧೋನಿ ಬ್ಯಾಟಿನಿಂದ ಬಹಳಷ್ಟು “ರಿಸ್ಕಿ ಶಾಟ್‌’ಗಳು ಸಿಡಿಯುತ್ತಿದ್ದವು. ಹೀಗಾಗಿಯೇ ಇವು “ಅಸಾಂಪ್ರದಾಯಿಕ ಶೈಲಿ’ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಯಿತು. ಇವುಗಳಲ್ಲೊಂದು ಹೊಡೆತವೇ “ಹೆಲಿಕಾಪ್ಟರ್‌ ಶಾಟ್‌’ ಆಗಿತ್ತು!

ಧೋನಿಗೆ ಈ ಶಾಟ್‌ ಕಲಿಸಿಕೊಟ್ಟವರು ಸ್ನೇಹಿತ ಸಂತೋಷ್‌ ಲಾಲ್‌. ರಾಂಚಿಯಲ್ಲಿ ನಡೆಯುತ್ತಿದ್ದ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಗಳ ವೇಳೆ ಧೋನಿ ಇದನ್ನು ಸಲೀಸಾಗಿ ಬಾರಿಸುತ್ತಿದ್ದರು. ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಧೋನಿಗಷ್ಟೇ ಸೀಮಿತವಾದ ಹೊಡೆತ ಎನಿಸಿಕೊಂಡಿತು. 2011ರ ವಿಶ್ವಕಪ್‌ ಫೈನಲ್‌ನಲ್ಲಿ ನುವಾನ್‌ ಕುಲಶೇಖರ ಎಸೆತವನ್ನು ಧೋನಿ ಲಾಂಗ್‌-ಆನ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟಿದ್ದು ಕೂಡ ಇಂಥದೇ ಹೊಡೆತವಾಗಿತ್ತು. ಅವರ ಹೆಲಿಕಾಪ್ಟರ್‌ ಶಾಟ್‌ ವಿಶ್ವಕಪ್‌ನಲ್ಲೂ ಇತಿಹಾಸ ಬರೆದಿತ್ತು!

Advertisement

Udayavani is now on Telegram. Click here to join our channel and stay updated with the latest news.

Next