ಹೈದರಾಬಾದ್: ಇಲ್ಲಿ ಶುಕ್ರವಾರ (ಅ 6) ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನ ತಂಡವು ನೆದರ್ಲೆಂಡ್ಸ್ ವಿರುದ್ಧ 81ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡಚ್ಚರು ಆರಂಭದಲ್ಲಿ ಚೆಂಡಿನೊಂದಿಗೆ ಅದ್ಭುತವಾಗಿ ಕಂಡು ಬಂದರು. ಪಾಕಿಸ್ಥಾನಕ್ಕೆ ಆರಂಭಿಕ ಆಘಾತ ನೀಡಿದರು. ತಕ್ಕಮಟ್ಟಿಗೆ ಶಿಸ್ತಿನ ಬೌಲಿಂಗ್ ಪ್ರದರ್ಶನದೊಂದಿಗೆ ಪಾಕಿಸ್ಥಾನ ಬ್ಯಾಟ್ಸ್ ಮ್ಯಾನ್ ಗಳನ್ನ 49 ಓವರ್ ಗಳಲ್ಲಿ 286 ಕ್ಕೆ ನಿಲ್ಲಿಸಿದರು.
ಫಖಾರ್ ಜಮಾನ್ 12, ಇಮಾಮ್-ಉಲ್-ಹಕ್15 ರನ್ ಗಳಿಸಿದ್ದ ವೇಳೆ ನಾಯಕ ಬಾಬರ್ ಅಜಮ್ 5 ರನ್ ಗಳಿಸಿ ಔಟಾದರು. 38 ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ಮೊಹಮ್ಮದ್ ರಿಜ್ವಾನ್ (75 ಎಸೆತಗಳಲ್ಲಿ 68) ಮತ್ತು ಸೌದ್ ಶಕೀಲ್ (52 ಎಸೆತಗಳಲ್ಲಿ 68) ಅವರ ಅರ್ಧಶತಕಗಳು ಉತ್ತಮ ಸ್ಕೋರ್ ಕಲೆ ಹಾಕಲು ನೆರವಾದವು. ಮೊಹಮ್ಮದ್ ನವಾಜ್ 39, ಶಾದಾಬ್ ಖಾನ್ 32 ರನ್, ಕೊನೆಯಲ್ಲಿ ಬಂದ ಶಾಹೀನ್ ಅಫ್ರಿದಿ ಔಟಾಗದೆ 13, ಹ್ಯಾರಿಸ್ ರೌಫ್16 ರನ್ ಗಳಿಸಿದ್ದು ಸ್ಕೋರ್ ಹೆಚ್ಚಿಸಲು ನೆರವಾಯಿತು. ಬಾಸ್ ಡಿ ಲೀಡೆ ನಾಲ್ಕು ವಿಕೆಟ್ ಕಿತ್ತು ಪಾಕಿಸ್ಥಾನವನ್ನು 286 ಕ್ಕೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 41 ಓವರ್ ಗಳಲ್ಲಿ 205 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.
ಆರಂಭಿಕ ಆಟಗಾರ ವಿಕ್ರಮಜಿತ್ ಸಿಂಗ್ 52 ರನ್ ಗಳಿಸಿ ಔಟಾದರು. ಕಾಲಿನ್ ಅಕರ್ಮನ್ 17 ರನ್, ಬ್ಯಾಟಿಂಗ್ ನಲ್ಲೂ ಸಾಮರ್ಥ್ಯ ತೋರಿದ ಬಾಸ್ ಡಿ ಲೀಡೆ 67 ರನ್ ಗಳಿಸಿ ಔಟಾದರು.ಕೊನೆಯಲ್ಲಿ ಬಂದ ಲೋಗನ್ ವ್ಯಾನ್ ಬೀಕ್ ಔಟಾಗದೆ 28 ರನ್ ಗಳಿಸಿದರು. ಹ್ಯಾರಿಸ್ ರೌಫ್ 3, ಹಸನ್ ಅಲಿ 2 ಮತ್ತು ಶಾಹಿನ್ ಅಫ್ರಿದಿ, ಇಫ್ತಿಕರ್,ನವಾಜ್,ಶಾದಾಬ್ ತಲಾ 1 ವಿಕೆಟ್ ಪಡೆದರು.