ಲಕ್ನೋ: ಕೂಟದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಶ್ರೀಲಂಕಾ ಇಂದು ಮೊದಲ ಜಯ ಸಾಧಿಸಿದೆ. ನೆದರ್ಲ್ಯಾಂಡ್ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವು ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ ತಂಡವು 49.4 ಓವರ್ ಗಳಲ್ಲಿ 262 ರನ್ ಪೇರಿಸಿದರೆ, ಸದೀರ ಸಮರವಿಕ್ರಮ ಬ್ಯಾಟಿಂಗ್ ನೆರವಿನಿಂದ ಲಂಕಾವು 48.2 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಡಚ್ಚರು ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿದರು. ಒಂದು ಹಂತದಲ್ಲಿ 91 ರನ್ ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಮತ್ತು ವ್ಯಾನ್ ಬೀಕ್ ಸೇರಿ ಏಳನೇ ವಿಕೆಟ್ ಗೆ 130 ರನ್ ಜೊತೆಯಾಟವಾಡಿದರು. ಸೈಬ್ರಾಂಡ್ 70 ರನ್ ಗಳಿಸಿದರೆ, ವ್ಯಾನ್ ಬೀಕ್ 59 ರನ್ ಗಳಿಸಿದರು.
ಲಂಕಾ ಪರ ಕಸುನ್ ರಜಿತಾ ಮತ್ತು ದಿಲ್ಶನ್ ಮಧುಶನಕ ತಲಾ ನಾಲ್ಕು ವಿಕೆಟ್ ಕಿತ್ತರು. ಲಂಕಾ ಬೌಲರ್ ಗಳು 33 ರನ್ ಗಳನ್ನು ಎಕ್ಸ್ಟಾ ರೂಪದಲ್ಲಿ ಬಿಟ್ಟುಕೊಟ್ಟರು.
ಚೇಸಿಂಗ್ ಆರಂಭಿಸಿದ ಲಂಕಾ ಕುಸಾಲ್ ಪೆರೇರಾ ಮತ್ತು ಕುಸಾಲ್ ಮೆಂಡಿಸ್ ರೂಪದಲ್ಲಿ ಎರಡು ವಿಕೆಟ್ ಆರಂಭದಲ್ಲೇ ಕಳೆದುಕೊಂಡರೂ ನಿಸ್ಸಾಂಕ ಮತ್ತು ಸದೀರ ತಂಡವನ್ನು ಆಧರಿಸಿದರು. ನಿಸ್ಸಾಂಕ 54 ರನ್ ಮಾಡಿದರೆ, ಕೊನೆಯವರೆಗೂ ನಿಂತು ಆಡಿದ ಸದೀರ ಸಮರವಿಕ್ರಮ ಅಜೇಯ 91 ರನ್ ಗಳಿಸಿದರು. ಚರಿತ ಅಸಲಂಕ 44 ರನ್ ಮತ್ತು ಧನಂಜಯ ಡಿಸಿಲ್ವ 30 ರನ್ ಮಾಡಿದರು.
ಮೊದಲ ಗೆಲುವು ಸಾಧಿಸಿದ ಶ್ರೀಲಂಕಾ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿ 9ನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಅದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ನೆದರ್ಲ್ಯಾಂಡ್ ತಂಡವು ಆಸ್ಟ್ರೆಲಿಯಾವನ್ನು ಎದುರಿಸಲಿದೆ.