Advertisement
ಹೌದು, ಅದು ಬೇರೆ ಏನೂ ಅಲ್ಲ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ. ಎರಡೂ ರಾಷ್ಟ್ರಗಳ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿರುವ ದಿನ ಅದು. ಎರಡೂ ರಾಷ್ಟ್ರದಲ್ಲಿಯೂ ಕ್ರಿಕೆಟ್ ಆರಾಧ್ಯ ಕ್ರೀಡೆ. ರಾಜಕೀಯ ಸಂಬಂಧದಲ್ಲಿ ಎರಡೂ ರಾಷ್ಟ್ರಗಳು ಹಾವು ಮುಂಗುಸಿ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳಾಗಿಯೇ ಕಣಕ್ಕೆ ಇಳಿಯಬೇಕಾಗಿದೆ.
ಎರಡೂ ರಾಷ್ಟ್ರಗಳ ನಡುವಿನ ರಾಜಕೀಯ ವಾತಾವರಣ ಹದಗೆಟ್ಟ ಕಾರಣ ಅದು ಕ್ರಿಕೆಟ್ ಮೇಲೆಯೂ ಬಿದ್ದಿದೆ. ಇನ್ನೇನು ಸರಿ ಆಯ್ತು ಅನ್ನುವ ಹೊತ್ತಿಗೆ ಮತ್ತೇನಾದರೂ ವಿವಾದ ಹುಟ್ಟಿಕೊಳ್ಳುತ್ತದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖೀಯಾಗುವುದು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿಗಳಲ್ಲಿ ಮಾತ್ರವಾಗಿದೆ. ಕೊನೆಯಬಾರಿಗೆ ಈ ಎರಡೂ ರಾಷ್ಟ್ರಗಳು ಏಕದಿನ ಪಂದ್ಯದಲ್ಲಿ ಎದುರುಬದುರಾಗಿದ್ದು, 2015ರ ವಿಶ್ವಕಪ್‌ನಲ್ಲಿ. ಆ ಪಂದ್ಯದಲ್ಲಿ ಭಾರತ 76 ರನ್‌ಗಳಿಂದ ಗೆದ್ದಿದೆ. ಜತೆಗೆ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಅಜೇಯ ಓಟವನ್ನು ಮುಂದುವರಿಸಿದೆ. ಅದು ಬಿಟ್ಟರೆ ಟಿ20 ಪಂದ್ಯದಲ್ಲಿ ಎದುರಾಗಿದ್ದು, 2016ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ. ಆ ಪಂದ್ಯದಲ್ಲಿಯೂ ಭಾರತ 6 ವಿಕೆಟ್ ಜಯ ಸಾಧಿಸಿತ್ತು. ಟೆಸ್ಟ್‌ಗೆ ಬಂದರೆ 2007ನೇ ವರ್ಷವೇ ಕೊನೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೇ ಗುಂಪು
ಈ ತಂಡಗಳು ಇನ್ನೊಮ್ಮೆ ಮುಖಾಮುಖೀಯಾಗಲು ಕಾರಣ ಚಾಂಪಿಯನ್ಸ್ ಟ್ರೋಫಿ. ಜೂನ್ 1 ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು “ಬಿ’ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಭಾರತ ಮೊದಲ ಪಂದ್ಯವನ್ನು ಜೂ.4 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳ ಅಭಿಮಾನಿಗಲ್ಲಿ ಕ್ರೇಜ್ ಸೃಷ್ಟಿಯಾಗಿದೆ. ಬೆಟ್ಟಿಂಗ್ ದಂಧೆಯೂ ಜೋರಾಗಿ ನಡೆಯುತ್ತದೆ.
Related Articles
ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಎಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಅನ್ನುವುದಕ್ಕೆ ಅವರ ಈ ಹಿಂದಿನ ವರ್ತನೆಯೇ ಸಾಕ್ಷಿ. ಗೆದ್ದ ತಂಡದ ಪರ ಹಾದಿ ಬೀದಿಯಲ್ಲಿ ಪಟಾಕಿಯ ಸದ್ದು. ಆದರೆ ಸೋತರೆ ಆಟಗಾರರ ಮನೆ ಮೇಲೆ ಕಲ್ಲು ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲ. ಇದು ಎರಡೂ ರಾಷ್ಟ್ರಗಳಲ್ಲಿಯೂ ಈ ಹಿಂದೆ ನಡೆದ ಇತಿಹಾಸವಿದೆ. ಹೀಗಾಗಿ ಇದು ಆಟಗಾರರನ್ನು ಸದಾ ಜಾಗೃತರಾಗಿರುವಂತೆ ಮಾಡುತ್ತಿದೆ.
Advertisement
ಈ ಹಿಂದಿನ ಏಕದಿನ ಸಾಧನೆ ನೋಡುವುದಾದರೆ ಎರಡೂ ತಂಡಗಳು ಮುಖಾಮುಖೀಯಾಗಿದ್ದು 127 ಪಂದ್ಯದಲ್ಲಿ. ಇದರಲ್ಲಿ ಭಾರತದ ಗೆಲುವು 51, ಪಾಕಿಸ್ತಾನದ ಗೆಲುವು 72, ಟೈ ಆಗಿದ್ದು 4 ಪಂದ್ಯ. ಹೀಗಾಗಿ ಪಾಕಿಸ್ತಾನವೇ ಮೇಲುಗೈ ಸಾಧಿಸಿದೆ. ಆದರೆ ವಿಶ್ವ ಮಟ್ಟದಲ್ಲಿ ಮಹತ್ವ ಪಡೆಯುವ ವಿಶ್ವಕಪ್ ನಂತಹ ಕೂಟದಲ್ಲಿ ಪಾಕಿಸ್ತಾನವೇ ಸೋಲುಂಡಿದೆ. ಭಾರತ ಒಂದು ಪಂದ್ಯವನ್ನೂ ಬಿಟ್ಟುಕೊಟ್ಟಿಲ್ಲ. ಇದರಿಂದ ಪಾಕ್ ಆಟಗಾರರೇ ಅಲ್ಲಿಯ ಅಭಿಮಾನಿಗಳ ಆಕ್ರೋಶಕ್ಕೆ ಹೆಚ್ಚಿನದಾಗಿ ತುತ್ತಾದವರು.
ಭಾರತವೇ ಬಲಾಡ್ಯಸದ್ಯದ ಸ್ಥಿತಿಯಲ್ಲಿ ಸಾಮರ್ಥ್ಯದ ದೃಷ್ಟಿಯಲ್ಲಿ ನೋಡುವುದಾದರೆ ಭಾರತವೇ ಬಲಾಡ್ಯವಾಗಿವೆ. ಕಳೆದ 2 ವರ್ಷದಿಂದ ಪಾಕಿಸ್ತಾನ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದೆ. ಅದರೆ ಭಾರತ ವಿರುದ್ಧದ ಪಂದ್ಯ ಅಂದರೆ ಆಟಗಾರರು ನಿರ್ಲಕ್ಷಿಸುವುದಿಲ್ಲ. ರೋಚಕ ಹೋರಾಟ ನೀಡುತ್ತಾರೆ. ಪಕ್ಕಾ ಯುದ್ಧದ ಕಣದಲ್ಲಿದ್ದ ಸೈನಿಕರಂತೆ ಹೋರಾಟ ನಡೆಸುತ್ತಾರೆ. ಈ ದೃಷ್ಟಿಯಲ್ಲಿ ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು. ಐಪಿಎಲ್‌ನ ವಿವಿಧ ತಂಡಗಳಲ್ಲಿ ಭಾರತೀಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿರುವುದರಿಂದ ಇದು ತಂಡಕ್ಕೆ ಅನುಕೂಲವಾಗುವ ಸಾಧ್ಯತೆ ಇದೆ. ಆದರೆ ಚಾಂಪಿಯನ್ಸ್ ಟ್ರೋಫಿ ಏಕದಿನ ಮಾದರಿಯಾದ್ದರಿಂದ ತಾಳ್ಮೆಯ ಆಟ ಮುಖ್ಯ. ಟಿ20 ಪಂದ್ಯದಂತೆ ಹೊಡೆಬಡಿ ಆಟವಲ್ಲ. ಭಾರತ-ಪಾಕ್ ಪಂದ್ಯಕ್ಕೆ ಕುತೂಹಲ ಏಕೆ?
ಇದರ ಮೂಲ ಎರಡೂ ದೇಶಗಳ ನಡುವಿನ ಹದಗೆಟ್ಟ ಸಂಬಂಧ. ಆಟಗಾರರ ನಡುವೆ ಉತ್ತಮ ಸಂಬಂಧವಿದೆ. ಆದರೆ ಹಳಸಿದ ರಾಜಕೀಯ ಸಂಬಂಧ, ಗಡಿ ಸಂಬಂಧ, ಭಯೋತ್ಪಾದನೆ, ಕಾಶ್ಮೀರ ವಿವಾದ…ಇವುಗಳ ನೆರಳು ಕ್ರಿಕೆಟ್
ಸರಣಿಗಳ ಮೇಲೆ ಬಿದ್ದಿದೆ. ಹೀಗಾಗಿ ಅಪರೂಪಕೊಮ್ಮೆ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಅಂತಹ ಟೂರ್ನಿಗಳಲ್ಲಿ ಮಾತ್ರ ಮುಖಾಮುಖೀಯಾಗಬೇಕಾಗಿದೆ. ಎರಡೂ ರಾಷ್ಟ್ರಗಳ ನಡುವೆ ಸರಣಿ ನಡೆಯುತ್ತಿದ್ದರೆ ಇಷ್ಟೊಂದು ಕೌತುಕ ಹುಟ್ಟಿಕೊಳ್ಳುತ್ತಿರಲಿಲ್ಲ. ಅಪರೂಪಕೊಮ್ಮೆ ಮುಖಾಮುಖೀಯಾಗುತ್ತಿರುವುದೂ, ಪಂದ್ಯದ ಬಗ್ಗೆ ಕುತೂಹಲ ಹೆಚ್ಚಲು ಒಂದು ಕಾರಣವಾಗಿದೆ. ಮಂಜು ಮಳಗುಳಿ