ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುವ ಮಟ್ಟಿಗೆ ಉತ್ತಮ ತರಬೇತಿ ನೀಡುವುದಾಗಿ ಹೇಳಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೊಡಗು ಮೂಲದ ಕ್ರಿಕೆಟ್ ಕೋಚ್‌ನನ್ನು ಫೋಕ್ಸೋ ಕಾಯ್ದೆಯಡಿ ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆಯ ನಾಸಿರ್ (40) ಬಂಧಿತ. ಆರೋಪಿ ಕ್ರಿಕೆಟ್ ಹೇಳಿಕೊಂಡುವ ನೆಪದಲ್ಲಿ ಬಾಲಕನ ಜತೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ, ಶನಿವಾರ ಸಂಜೆ ಜಿಕೆವಿಕೆ ಆವರಣದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಮನೆಗೆ ತೆರಳಿದ ಬಾಲಕ ಮಂಕಾಗಿರುವುದನ್ನು ಕಂಡು ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಡಗಿನ ನಾಸಿರ್ ಜಾಲಹಳ್ಳಿಯಲ್ಲಿರುವ ಮೈದಾನವೊಂದರಲ್ಲಿ ಕಳೆದ 8 ವರ್ಷಗಳಿಂದ ಸ್ಥಳೀಯ ಬಾಲಕರಿಗೆ ಕ್ರಿಕೆಟ್ ತರಬೇತಿ ನೀಡುತ್ತಿದ್ದ. ವೀಕೆಂಡ್‌ನಲ್ಲಿ ಕ್ರಿಕೆಟ್ ಕಲಿಯಲು ಬರುತ್ತಿದ್ದ ಬಾಲಕನ ಜತೆ ನಾಸಿರ್ ಅತಿಯಾದ ಸಲುಗೆ ಬೆಳೆಸಿಕೊಂಡಿದ್ದ. ಆದರೆ, ಆರೋಪಿ ಒಳಮರ್ಮ ಬಾಲಕನಿಗೆ ತಿಳಿದಿರಲ್ಲಿಲ್ಲ.
ಬಲಕನ ಮುಗ್ಧತೆಯನ್ನೇ ದುರುಪಯೋಗ ಪಡಿಸಿಕೊಂಡ ನಾಸಿರ್ ಶನಿವಾರ ಸಂಜೆ ತರಬೇತಿ ಮುಗಿದ ಬಳಿಕ ಬೇರೆ ಬಾಲಕರನ್ನು ಮನೆಗೆ ಕಳುಹಿಸಿ ಈ ಬಾಲಕನನ್ನು ಮಾತ್ರ ತನ್ನೊಂದಿಗೆ ಇರಿಸಿಕೊಂಡಿದ್ದ. ಬಳಿಕ ಪುಸಲಾಯಿಸಿ ಜಿಕೆವಿಕೆ ಆವರಣಕ್ಕೆ ಕರೆದೊಯ್ದಿದ್ದಾನೆ. ಪೊದೆಯೊಂದರ ಬಳಿ ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಬಳಿಕ ಬಟ್ಟೆ ಬಿಚ್ಚಲು ಹೇಳಿದಾಗ ಬಾಲಕ ಪ್ರತಿರೋಧವೊಡ್ಡಿ ತಪ್ಪಿಸಿಕೊಂಡು ಸ್ಥಳದಿಂದ ಓಡಿ ಬಂದಿದ್ದಾನೆ.
ನಂತರ ಮನೆಗೆ ತೆರಳಿದ ಬಾಲಕ ರಾತ್ರಿ ಊಟ ಮಾಡಿಲ್ಲ. ಆತಂಕಗೊಂಡ ಪೋಷಕರು ಮಗನನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾನೆ. ಭಾನುವಾರ ಬೆಳಗ್ಗೆ ಯಲಹಂಕ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ದೂರು ದಾಖಲಾದ ಅರ್ಧಗಂಟೆಯಲ್ಲೇ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಂದೊಮ್ಮೆ ಅಮಾನತುಗೊಂಡಿದ್ದ ನಾಸಿರ್: ನಾಸಿರ್ ಈ ಮೊದಲು ಆರ್.ಟಿ.ನಗರದ ಶಾಲೆಯೊಂದರಲ್ಲಿ ಕ್ರಿಕೆಟ್ ಕೋಚ್ ಆಗಿದ್ದ. ಆಗಲೂ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿತ್ತು. ನಂತರ ಕ್ರಿಕೆಟ್ ಅಕಾಡೆಮಿಯೊಂದು ಈತನನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿತ್ತು.
ಈತನ ಬಗ್ಗೆ ಮಾಹಿತಿ ಗೊತ್ತಿದ್ದ ಹಿರಿಯ ಕ್ರಿಕೆಟ್ ಆಟಗಾರರು ತೆಗೆಯಲು ಸೂಚಿಸಿದರು. ಆದರೂ ಅಕಾಡೆಮಿ ಇಟ್ಟುಕೊಂಡಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ನಾಸಿರ್ ವಿರುದ್ಧ ಇದೇ ರೀತಿಯ ಇನ್ನೂ ಹಲವು ಆರೋಪಗಳಿರುವ ಬಗ್ಗೆ ಅನುಮಾನವಿದ್ದು, ವಶಕ್ಕೆ ಪಡೆದು ವಿಚಾರಣೆ ಮುಂದುವರಿಸುವುದಾಗಿ ಯಲಹಂಕ ಠಾಣೆ ಪೊಲೀಸರು ತಿಳಿಸಿದ್ದಾರೆ.