ಮಂಗಳೂರು: ನಗರದಲ್ಲಿ ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಓರ್ವನನ್ನು ಅಪರಾಧ ಪತ್ತೆ ದಳದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಗರದ ನಿವಾಸಿ ಕೀರ್ತಿರಾಜ್ ಬಂಧಿತ ಆರೋಪಿ. ಆತನಿಂದ 7 ಲಕ್ಷ ರೂ. ನಗದು, 5 ಮೊಬೈಲ್ ಹಾಗೂ ಒಂದು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಮೇಲೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಅಪರಾಧ ಪತ್ತೆ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭಗೊಂಡ ಬಳಿಕ ನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿರುವ ಎರಡನೇ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಇದಾಗಿದೆ.
ಐಪಿಎಲ್ ಮತ್ತು ವಿಶ್ವಕಪ್ ಕ್ರಿಕೆಟ್ ಸಂದರ್ಭ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ಜಾಲ ಕಾರ್ಯಾಚರಿಸುವ ಸಾಧ್ಯತೆ ಮನಗಂಡ ನಗರ ಪೊಲೀಸ್ ಆಯುಕ್ತ ಡಾ| ಸಂದೀಪ್ ಪಾಟೀಲ್ ಇದರ ವಿರುದ್ಧ ಕಠಿನ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದರು.ಅದರಂತೆ ಐಪಿಎಲ್ ಸಂದರ್ಭದಲ್ಲೂ ನಗರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬೆಟ್ಟಿಂಗ್ ವ್ಯವಹಾರದಲ್ಲಿ ಸಂಗ್ರಹಿಸಿದ್ದ ಲಕ್ಷಾಂತರ ರೂ. ವಶಪಡಿಸಿಕೊಂಡಿದ್ದರು.
ವಿಶ್ವಕಪ್ ಕ್ರಿಕೆಟ್ ಟೂರ್ನಿ ಪ್ರಾರಂಭವಾಗುತ್ತಿದ್ದಂತೆ ಮಂಗಳೂರಿನಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿರುವವರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಟ್ವೀಟ್ ಕೂಡ ಮಾಡಿ ಎಚ್ಚರಿಕೆ ನೀಡಿದ್ದರು.
ಅದರಂತೆ ನಗರ ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.