Advertisement

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರು

06:05 PM Apr 19, 2021 | Team Udayavani |

ಚಿತ್ತಾಪುರ: ಐಪಿಎಲ್‌ ಕ್ರಿಕೆಟ್‌ ದಿನದಿಂದ ದಿನಕ್ಕೆ ರಂಗೇರುತ್ತಿರುವುದರ ಮಧ್ಯೆ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರಾಗಿದೆ. ಬೆಟ್ಟಿಂಗ್‌ ದಂಧೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಹುತೇಕ ಯುವ ಸಮುದಾಯವೇ ತೊಡಗಿರುವುದು ಆತಂಕ ಹೆಚ್ಚಿಸಿದೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕಿದೆ.

Advertisement

ಆನ್‌ಲೈನ್‌ನಲ್ಲಿ ವ್ಯವಹಾರ ಇರುವುದರಿಂದ ಯಾವ ಪಂದ್ಯ? ಎಷ್ಟು ಗಂಟೆಗೆ ಆರಂಭಗೊಳ್ಳುತ್ತದೆ? ಎದುರಾಳಿ ಪಂದ್ಯದಲ್ಲಿ ಯಾರು ಉತ್ತಮ ಆಟಗಾರರು? ಅವರ ಪ್ರದರ್ಶನ ಹೇಗೆ? ಯಾವ ಟೀಂ ಟಾಸ್‌ ಗೆಲ್ಲುತ್ತದೆ? ಯಾವ ಬೌಲರ್‌ ಎಷ್ಟು ವಿಕೇಟ್‌ ಪಡೆಯುತ್ತಾನೆ? ಯಾವ ಬ್ಯಾಟ್‌ Õಮ್ಯಾನ್‌ ಎಷ್ಟು ರನ್‌ ಹೊಡೆಯುತ್ತಾನೆ? ಎಷ್ಟು ಓವರ್‌ಗಳಲ್ಲಿ ಪಂದ್ಯ ಮುಗಿಯಲಿದೆ? 10 ಓವರ್‌ಗಳಲ್ಲಿ ಬ್ಯಾಟಿಂಗ್‌ ಟೀಂ ಎಷ್ಟು ರನ್‌ ಗಳಿಸುತ್ತದೆ? 20 ಓವರ್‌ನಲ್ಲಿ ಎಷ್ಟು ರನ್‌ ಹೊಡೆಯುತ್ತದೆ? ಯಾವುದು ಫೆವ್‌ ರೆಟ್‌ ಟೀಂ? ಯಾವುದು ಅನ್‌ ಫೆವ್‌ರೆಟ್‌ ಟೀಂ ಎಂದು ತರಾವರಿ ಪ್ರಶ್ನೆ ಹಾಕಿ ಬೆಟ್ಟಿಂಗ್‌ ಗೆ ಹಣ ಹೂಡುವ ಖಯಾಲಿ ದಟ್ಟವಾಗಿ ಗೋಚರಿಸಿದೆ.

ಬೆಟ್ಟಿಂಗ್‌ನಲ್ಲಿ ಹೂಡಿದ ಹಣವನ್ನು ಆನ್‌ಲೈನ್‌ನಲ್ಲೇ ಬುಕ್ಕಿಗಳಿಗೆ ಅಥವಾ ಬೆಟ್ಟಿಂಗ್‌ ಆಡಿಸಿದವರ ಖಾತೆಗೆ ಹಣ ರವಾನೆಯಾಗುತ್ತಿದೆ. ಪಂದ್ಯ ಆರಂಭವಾದ ವೇಳೆ ಕಣದಲ್ಲಿರುವ ಎರಡು ಟೀಂ ಸ್ಟ್ರಾಂಗ್‌ ಇದ್ದರೆ ಬೆಟ್ಟಿಂಗ್‌ನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಲಾಗಲ್ಲ. ಒಂದು ವೇಳೆ ಕಣದಲ್ಲಿರುವ ಎರಡು ಟೀಂಗಳಲ್ಲಿ ಒಂದು ಟೀಂ ಡಲ್‌ ಇದ್ದರೆ ಅಂತಹ ಟೀಂಗಳ ಪರ ಹಣ ಹಾಕುವವರಿಗೆ ಬೆಟ್ಟಿಂಗ್‌ ಮಾಡಿದ ಹಣಕ್ಕಿಂತ ದುಪ್ಪಟ್ಟು ನೀಡಲಾಗುವುದೆಂದು ಯುವಕರಿಗೆ ಆಮಿಷವೊಡ್ಡಲಾಗುತ್ತಿದೆ.

ಬೆಟ್ಟಿಂಗ್‌ ಆಡುವವರಿಗೆ ಸಾವಿರ ರೂ.ಗೆ 10 ರೂ. ವರೆಗೆ ಹಣ ನೀಡಲಾಗುವುದು ಎಂದು ಬುಕ್ಕಿಗಳು ಆಮಿಷ ಒಡ್ಡುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ. ಬುಕ್ಕಿಗಳು ಸೇರಿ ಬೆಟ್ಟಿಂಗ್‌ ಆಡುವವರಿಗೆ ಟಿಪ್ಸ್‌ ನೀಡುವ ಸಲುವಾಗಿಯೇ ಕೆಲ ಅಧಿಕೃತ ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಇನ್ನು ಕೆಲ ವೆಬ್‌ಸೈಟ್‌ಗಳು ಮಾನ್ಯತೆ ಪಡೆಯದೇ ಟಿಪ್ಸ್‌ ನೀಡುವ ಮೂಲಕ ತೆರಿಗೆ ವಂಚಿಸುತ್ತಿವೆ. ಬೆಟ್ಟಿಂಗ್‌ ಆಡುವವರು ಮೊದಲೇ 30 ಸಾವಿರ ರೂ.ಗಳನ್ನು ಬುಕ್ಕಿಗಳಲ್ಲಿ ಡಿಪಾಜಿಟ್‌ ಮಾಡಿದಾಗ ಮಾತ್ರ ಆಡಲು ಸಾಧ್ಯ. ಬೆಟ್ಟಿಂಗ್‌ ಆಡಿದವರು ಬುಕ್ಕಿಗಳಿಗೆ ನೇರವಾಗಿ ನಗದು ರೂಪದಲ್ಲಿ ಹಣ ನೀಡದೇ ಆನ್‌ಲೈನ್‌ ಮೂಲಕ ಪೇ-ಟಿಎಂ, ಗೂಗಲ್‌-ಪೇ, ಫೋನ್‌ ಪೇ ಮೂಲಕ ವ್ಯವಹಾರ ನಡೆಸುತ್ತಾರೆಂದು ಹೇಳಲಾಗಿದೆ.

ಕೆಲವರು ಬೆಟ್ಟಿಂಗ್‌ನಲ್ಲಿ ಸೋತು ಹೊಲ, ಮನೆ ಮಾರುವಂತಹ ಸ್ಥಿತಿಗೂ ಬಂದಿದ್ದಾರೆ. ಇನ್ನೂ ಕೆಲವರು ಲಕ್ಷಾಂತರ ರೂ. ಸಾಲ ಮಾಡಿ ಹಣ ಮರುಪಾವತಿಸಲಾಗದೇ ಊರು ಬಿಟ್ಟು ಹೋಗಿ ಎಂಟತ್ತು ವರ್ಷಗಳಾದರೂ ಮರಳಿ ಬಂದಿಲ್ಲ.

Advertisement

ತಾಲೂಕಿನಲ್ಲಿ ಐಪಿಎಲ್‌ ಗ್ಯಾಂಬ್ಲಿಂಗ್‌ ನಡೆಯುತ್ತಿದೆ. ಜೂಜಾಟದ ಕ್ಲಬ್‌ ಶುರುವಾಗಿದೆ. ಮಟಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಗಾಂಜಾ ಪತ್ತೆಯಾಗುತ್ತಿದೆ. ಇದರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳು ಕೂಡಲೇ ಅಕ್ರಮ-ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಬೇಕು. ಒಂದು ವೇಳೆ ಕಡೆಗಣಿಸಿದರೆ ಶಿಸ್ತು ಕ್ರಮ ಅನಿವಾರ್ಯವಾಗಿದೆ.
ಪ್ರಿಯಾಂಕ್‌ ಖರ್ಗೆ, ಮಾಜಿ ಸಚಿವ

ಚಿತ್ತಾಪುರ ತಾಲೂಕಿನಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ. ಐಪಿಎಲ್‌ ಬೆಟ್ಟಿಂಗ್‌ ದಂಧೆ ಕುರಿತು ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಒಂದು ವೇಳೆ ಬೆಟ್ಟಿಂಗ್‌ ದಂಧೆಯಂತ ಪ್ರಕರಣಗಳು ಕಂಡು ಬಂದರೇ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದಂಧೆಯಲ್ಲಿ ಯಾರೇ ತೊಡಗಿದ್ದರೂ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ.
ಮಂಜುನಾಥರೆಡ್ಡಿ, ಪಿಎಸ್‌ಐ

ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ನಿಂದ ಯುವಕರು ವಿದ್ಯಾಭ್ಯಾಸಕಡೆಗೆ ಗಮನ ಹರಿಸದೆ ಅಡ್ಡ ದಾರಿ ತುಳಿಯುತ್ತಿದ್ದಾರೆ. ಹೀಗಾಗಿ ಇದನ್ನು ಶೀಘ್ರ ತಡೆಯಬೇಕು. ಇಲ್ಲದಿದ್ದರೆ ಮಕ್ಕಳ ಅಭ್ಯಾ ಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಸುರೇಶ ಕುಲಕರ್ಣಿ, ಸ್ಥಳೀಯ ನಿವಾಸಿ

*ಎಂ.ಡಿ ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next