ಸಿಡ್ನಿ: ಅಭ್ಯಾಸ ಪಂದ್ಯದ 3ನೇ ದಿನದಾಟದಲ್ಲಿ ಪ್ರವಾಸಿ ಭಾರತದ ಮೊತ್ತಕ್ಕೆ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ದಿಟ್ಟ ಜವಾಬು ನೀಡಿದೆ. 102 ಓವರ್‌ಗಳ ಆಟದಲ್ಲಿ 6 ವಿಕೆಟಿಗೆ 356 ತನ್ ಪೇರಿಸಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್ನಿಗೆ ಆಲೌಟ್ ಆಗಿತ್ತು.
ಸಿಡ್ನಿ ಅಂಗಳದಲ್ಲಿ ಭಾರತದ ವೇಗದ ಬೌಲರ್‌ಗಳು ನಿರೀಕ್ಷಿತ ಪರಿಣಾಮ ಬೀರದೇ ಹೋದರು. ಹೊಸ ಚೆಂಡನ್ನು ಹಂಚಿಕೊಂಡ ಉಮೇಶ್ ಯಾದವ್ (81ಕ್ಕೆ 1), ಇಶಾಂತ್ ಶರ್ಮ (57/0) ಘಾತಕವಾಗಿ ಪರಿಣಮಿಸಲಿಲ್ಲ. ಓವರಿಗೆ ಆರರ ಸರಾಸರಿಯಲ್ಲಿ ರನ್ ನೀಡುತ್ತ ಹೋದರು. ಆದರೆ ಮೊಹಮ್ಮದ್ ಶಮಿ ಬೌಲಿಂಗ್ ಗಮನಾರ್ಹ ಮಟ್ಟದಲ್ಲಿತ್ತು (67ಕ್ಕೆ 3). ಸ್ಪಿನ್ನರ್‌ಗಳಲ್ಲಿ ಯಶಸ್ಸು ಕಂಡದ್ದು ಆರ್. ಅಶ್ವಿನ್ ಮಾತ್ರ (63ಕ್ಕೆ 1). ರವೀಂದ್ರ ಜಡೇಜ, ಹನುಮ ವಿಹಾರಿ ವಿಕೆಟ್ ಕೀಳಲು ವಿಫಲರಾದರು. ಆರಂಭಿಕರಾದ ಡಿ’ಆರ್ಸಿ ಶಾರ್ಟ್ (74)-ಮ್ಯಾಕ್ಸ್ ಬ್ರಿಯಾಂಟ್ (62) ಮೊದಲ ವಿಕೆಟಿಗೆ 18.3 ಓವರ್‌ಗಳಲ್ಲಿ 114 ರನ್ ಪೇರಿಸಿ ಭಾರತದ ಬೌಲಿಂಗ್ ದೌರ್ಬಲ್ಯವನ್ನು ಸಾರಿದರು.
ಮಧ್ಯಮ ಕ್ರಮಾಂಕದಲ್ಲಿ ಜೇಕ್ ಕಾರ್ಡರ್ (38), ನಾಯಕ ಸ್ಯಾಮ್ ವೈಟ್‌ಮ್ಯಾನ್ (35) ಕೂಡ ಉತ್ತಮ ಆಟವಾಡಿದರು. ವಿಫಲರಾದದ್ದು ಪರಮ್ ಉಪ್ಪಲ್ (5) ಮತ್ತು ಮೊಜಾಥನ್ ಮೆರ್ಲೊ (3) ಮಾತ್ರ. ಇವರಿಬ್ಬರ ಶೀಘ್ರ ನಿರ್ಗಮನದಿಂದಾಗಿ 2ಕ್ಕೆ 213ರಲ್ಲಿದ್ದ ಆತಿಥೇಯ ತಂಡ 234ಕ್ಕೆ ತಲುಪುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಆದರೆ 7ನೇ ವಿಕೆಟಿಗೆ ಜತೆಗೂಡಿದ ಹ್ಯಾರ್ರಿ ನೀಲ್ಸೆನ್ (ಬ್ಯಾಟಿಂಗ್ 56) ಮತ್ತು ಆರನ್ ಹಾರ್ಡಿ (69) 122 ರನ್ ಪೇರಿಸಿ ಭಾರತವನ್ನು ಕಾಡಿದ್ದಾರೆ.
ಶನಿವಾರ ಪಂದ್ಯದ ಅಂತಿಮ ದಿನ. ಮೊದಲ ದಿನದಾಟ ಮಳೆಯಿಂದ ಪೂರ್ತಿ ನಷ್ಟವಾಗಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ-358. ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್-6 ವಿಕೆಟಿಗೆ 356 (ಶಾರ್ಟ್ 74, ಬ್ರಿಯಾಂಟ್ 62, ನೀಲ್ಸೆನ್ ಬ್ಯಾಟಿಂಗ್ 56, ಹಾರ್ಡಿ ಬ್ಯಾಟಿಂಗ್ 69, ಶಮಿ 67ಕ್ಕೆ 3, ಅಶ್ವಿನ್ 63ಕ್ಕೆ 1, ಉಮೇಶ್ ಯಾದವ್ 81ಕ್ಕೆ 1).