Advertisement
ಕೋವಿಡ್ ವೈರಸ್ ಹೊಡೆತದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯ ಭಾರೀ ನಷ್ಟ ಅನುಭವಿಸಿದ್ದು ಆರ್ಥಿಕ ಪರಿಸ್ಥಿತಿ ಹಳಿಗೆ ತರಲು ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಭಾರತ -ಆಸೀಸ್ ಸರಣಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಅಕ್ಟೋಬರ್ 18ರಿಂದ ಟಿ20 ವಿಶ್ವಕಪ್ ಕೂಡ ಆಸೀಸ್‌ನಲ್ಲಿ ಆರಂಭವಾಗಬೇಕಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಈ ಟಿ20 ಕೂಟ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ಯಾವುದೇ ಸರಣಿ ನಡೆಯದೇ ಇದ್ದರೆ ಕ್ರಿಕೆಟ್ ಆಸ್ಟ್ರೇಲಿಯ 769 ಕೋಟಿ ರೂ. ನಷ್ಟ ಅನುಭವಿಸುವ ಆತಂಕದಲ್ಲಿದೆ.
ಮುಂಬರುವ ಟಿ20 ವಿಶ್ವಕಪ್ ಮುಂದೂಡುವ ಬದಲು ಭಾರತದಲ್ಲಿ ನಡೆಸಿದರೆ ಉತ್ತಮ ಎಂದು ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ. “ನಮಗೆಲ್ಲರಿಗೂ ತಿಳಿದಿರುವಂತೆ, ಸೆಪ್ಟಂಬರ್ 30ರ ವರೆಗೆ ಆಸ್ಟ್ರೇಲಿಯ ಸರಕಾರ ವಿದೇಶಿಗರನ್ನು ಸ್ವದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ. ಆದರೆ ವಿಶ್ವಕಪ್ ಟೂರ್ನಿ ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಆದ್ದರಿಂದ ಇದು ಕಷ್ಟಕರವಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ 2020ರ ಟಿ20 ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿದರೆ, ಆಸ್ಟ್ರೇಲಿಯ ಮುಂದಿನ ಆವೃತಿಗೆ ಆತಿಥ್ಯ ವಹಿಸಹುದು ಎಂದು ಗಾವಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಕೋವಿಡ್ ಬೆದರಿಕೆಯು ಕಡಿಮೆಯಿದೆ. ಹೀಗಾಗಿ ಭಾರತದ ಆತಿಥ್ಯದಲ್ಲಿ ನಡೆಯುವ ಮುಂದಿನ ಟಿ20 ವಿಶ್ವಕಪ್ ಕೂಟವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಟ್ಟು ಈ ಬಾರಿಯ ಟಿ20 ವಿಶ್ವಕಪ್ ಭಾರತದಲ್ಲಿ ನಡೆಸಬಹುದು. ಆದರೆ ಇದಕ್ಕೆ ಭಾರತ ಮತ್ತು ಆಸ್ಟ್ರೇಲಿಯ ಒಪ್ಪಂದ ಮಾಡಿಕೊಂಡು ಆತಿಥ್ಯದ ಹಕ್ಕನ್ನು ವಿನಿಮಯ ಮಾಡಿಕೊಳ್ಳಬೇಕಾಗಿದೆ ಎಂದು ಗಾವಸ್ಕರ್ ಹೇಳಿದ್ದಾರೆ.